ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಕೋವಿಡ್ ನಿಂದಾಗಿ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ವ್ಯಕ್ತಿ ಸಾವನ್ನಪ್ಪಿದ್ದರೆ, ಅಂತಹ ಕುಟುಂಬಸ್ಥರಿಗೆ ರೂ. 1 ಲಕ್ಷ ಪರಿಹಾರವನ್ನು ರಾಜ್ಯ ಸರ್ಕಾರ ಘೋಷಿಸಿದೆ.
ಈ ಕುರಿತು ಸಿಎಂ ಬಿ.ಎಸ್. ಯಡಿಯೂರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಸ್ಥರಿಗೆ ರೂ. 1 ಲಕ್ಷ ಪರಿಹಾರ ನೀಡಲು ಸರ್ಕಾರ ಮುಂದಾಗಿದೆ. ಒಂದು ಕುಟುಂಬದಲ್ಲಿನ ಇಬ್ಬರು ಮೂವರು ದುಡಿಯುವ ವ್ಯಕ್ತಿ ಸಾವನ್ನಪ್ಪಿದ್ದರೂ ಒಬ್ಬರನ್ನು ಪರಿಗಣಿಸಿ ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದೆ.
30 ರಿಂದ 50 ವರ್ಷದೊಳಗಿನ ದುಡಿಯುವ ವ್ಯಕ್ತಿ ಕೋವಿಡ್ ಗೆ ಬಲಿಯಾಗಿದ್ದರೆ, ಅಂತಹ ಕುಟುಂಬಗಳಿಗೆ ಸರ್ಕಾರದ ಈ ನೆರವು ಸಿಗಲಿದೆ. ರಾಜ್ಯದಲ್ಲಿನ ಸುಮಾರು 25 ರಿಂದ 30 ಸಾವಿರ ಕುಟುಂಬಗಳು ಈ ಯೋಜನೆಯ ಲಾಭ ಪಡೆಯಬಹುದು ಎಂದು ಸರ್ಕಾರ ಅಂದಾಜಿಸಿದೆ.
ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಇಂತಹ ಯೋಜನೆಯೊಂದನ್ನು ಜಾರಿಗೊಳಿಸಿದೆ. ಮಹಾಮಾರಿಯಿಂದಾಗಿ ರಾಜ್ಯದಲ್ಲಿನ ಹಲವು ಕುಟುಂಬಗಳು ಬೀದಿಗೆ ಬಂದಿದ್ದು, ಅಂತಹ ಕುಟುಂಬಸ್ಥರ ನೆರವಿಗೆ ನಿಲ್ಲುವ ಉದ್ಧೇಶದಿಂದ ಸರ್ಕಾರ ಇಂತಹ ಮಹತ್ತರ ಯೋಜನೆ ಜಾರಿಗೊಳಿಸಿದೆ.