ವಿಜಯಸಾಕ್ಷಿ ಸುದ್ದಿ, ಗದಗ:
ಇತ್ತೀಚಿಗೆ ಬೈಕ್ ವ್ಹೀಲಿಂಗ್, ವಾಹನಗಳನ್ನು ಅಡ್ಡಾದಿಡ್ಡಿ ಓಡಿಸುವವರ ಸಂಖ್ಯೆ ಗದಗ-ಬೆಟಗೇರಿ ಅವಳಿ ನಗರದಲ್ಲಿ ಹೆಚ್ಚಾಗುತ್ತಿದೆ. ಹೀಗೆ ತಪ್ಪು ಮಾಡಿದವರಿಗೆ ಬುದ್ಧಿಮಾತು ಹೇಳಲು ಹೋಗುವವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸುತ್ತಿರುವುದು ಹೊಸತೇನಲ್ಲ. ಆದರೆ, ಈ ಭೂಪರು ಬುದ್ಧಿಮಾತು ಹೇಳಿದ ಪೊಲೀಸಪ್ಪನ ಮೇಲೆಯೇ ಹಲ್ಲೆ ನಡೆಸಿದ್ದಾರೆ.
ಹೌದು, ಬೆಟಗೇರಿ ಸೆಟ್ಲಮೆಂಟ್ (ಗಾಂಧಿ ನಗರ)ದ ಓರ್ವ ಸೇರಿ ಮೂವರು ಆರೋಪಿಗಳು ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಕಾನಸ್ಟೇಬಲ್ ಓರ್ವರಿಗೆ ಥಳಿಸಿರುವ ಘಟನೆ ನಿನ್ನೆ(ಗುರುವಾರ) ರಾತ್ರಿ ಪಾಲಾ ಬಾದಾಮಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಬಳಿ ನಡೆದಿದೆ.
ಹಾತಲಗೇರಿ ರಿಂಗ್ ರೋಡ್‌ನ ನಿವಾಸಿಗಳಾದ ಕಿಶೋರಕುಮಾರ ಮಂಜುನಾಥ ಕದಂ, ಪ್ರಭಾಕರ ವಾಸಪ್ಪ ಶೇಷಪ್ಪನವರ ಹಾಗೂ ಬೆಟಗೇರಿ ಸೆಟ್ಲಮೆಂಟ್‌ನ ಮಾರುತಿ ಮದ್ದಪ್ಪ ಮುತಗಾರ ಎಂಬ ಮೂವರು ಆರೋಪಿಗಳು ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ವಿವರ:
ಹಾತಲಗೇರಿ ರಿಂಗ್ ರೋಡ್‌ನ ನಿವಾಸಿ ಕಿಶೋರಕುಮಾರ ಎಂಬಾತ ತನ್ನ ರಾಯಲ್ ಎನ್‌ಫಿಲ್ಡ್ (ಕೆಎ 26 E 6444) ಬೈಕ್‌ನ್ನು ಅಡ್ಡಾದಿಡ್ಡಿಯಾಗಿ ಓಡಿಸುಕೊಂಡು ಬರುತ್ತಿದ್ದ. ಆಗ ಹಲ್ಲೆಗೊಳಗಾಗಿರುವ ಪೊಲೀಸ್ ಪೇದೆ ಸರಿಯಾಗಿ ವಾಹನ ಚಾಲನೆ ಮಾಡಿಕೊಂಡು ಹೋಗುವಂತೆ ತಿಳಿಸಿದ್ದಾರೆ. ಇಷ್ಟಕ್ಕೆ ಕಿಶೋರಕುಮಾರನ ಹಿಂದೆ ಬರುತ್ತಿದ್ದ ಮಾರುತಿ ಹಾಗೂ ಪ್ರಭಾಕರ ತಮ್ಮ ಬೈಕ್ (ಕೆಎ 26 E 5013)ನ್ನು ಅಡ್ಡಲಾಗಿ ನಿಲ್ಲಿಸಿ ‘ನಮಗೆ ಬುದ್ಧಿವಾದ ಹೇಳತಿ. ನಾವ್ಯಾರೆಂದು ತಿಳಿದುಕೊಂಡಿದ್ದೀಯಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ, ಮೊದಲನೇ ಆರೋಪಿ ಕಿಶೋರಕುಮಾರ ಜೊತೆಗೂಡಿ ಈ ಮೂವರು ಆರೋಪಿಗಳು ಹಲ್ಲೆ ನಡೆಸಿದ್ದಾರೆ. ನನ್ನ ಸರ್ಕಾರಿ ಸೇವೆಗೆ ಅಡ್ಡಿಪಡಿಸಿದ್ದಾರೆ ಎಂದು ಪೊಲೀಸ್ ಪೇದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.