ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಬೆಂಗಳೂರು: ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಕರ್ನಾಟಕದಲ್ಲಿ ರೈತರ ಹೋರಾಟ ಮುಂದುವರೆದಿದೆ.
ಭೂ ಸುಧಾರಣಾ ಮಸೂದೆಯನ್ನು ವಿಧಾನಪರಿಷತ್‌ನಲ್ಲಿ ಅಂಗೀಕರಿಸಿದ್ದನ್ನು ವಿರೋಧಿಸಿ, ರಾಜ್ಯಪಾಲರು ಮಸೂದೆಗೆ ಸಹಿ ಹಾಕಬಾರದು ಎಂದು ಒತ್ತಾಯಿಸಿ ರೈತ-ದಲಿತ-ಕಾರ್ಮಿಕ ಸಂಘಟನೆಗಳ ಐಕ್ಯಹೋರಾಟ ಸಮಿತಿಯಿಂದ ಗುರುವಾರ ರಾಜಭವನ ಚಲೋ ಹೋರಾಟ ಆರಂಭವಾಗಿದೆ.
ಗುರುವಾರ ಮುಂಜಾನೆಯೇ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಬಳಿ ಜಮಾಯಿಸಿದ ಸಾವಿರಾರು ರೈತರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈಲು ನಿಲ್ದಾಣದಿಂದ ಕೆ.ಆರ್.ಸರ್ಕಲ್ ಮತ್ತು ವಿಧಾನಸೌಧದ ಮುಂಭಾಗದಿಂದ ರಾಜಭವನ ತಲುಪಲು ಯೋಜಿಸಿದ್ದ ರೈತರನ್ನು ಸದ್ಯಕ್ಕೆ ಫ್ರೀಡಂಪಾರ್ಕ್‌ಬಳಿ ಪೊಲೀಸರು ತಡೆದಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಫ್ರೀಡಂಪಾರ್ಕ್ ರಸ್ತೆಯಲ್ಲಿ ವಾಹನ ಸಂಚಾರ ಸ್ತಭ್ದವಾಗಿದೆ.
ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ `ಸರ್ಕಾರ ಕಾಯ್ದೆಯನ್ನು ಅಂಗೀಕರಿಸಿ ನಮ್ಮನ್ನು ಮಾತುಕತೆಗೆ ಕರೆದಿದೆ. ಇದು ಸರ್ಕಾರದ ಪೂರ್ವಯೋಜಿತ ನಾಟಕ. ಹಾಗಾಗಿ ನಾವು ಮಾತುಕತೆಯಲ್ಲಿ ಪಾಲ್ಗೊಳ್ಳುವುದಿಲ್ಲ. ಹೋರಾಟ ಮುಂದುವರೆಸುತ್ತೇವೆ’ ಎಂದಿದ್ದಾರೆ.
ಕಬ್ಬು ಬೆಳೆಗಾರರ ಸಂಘದ ಕುರುಬೂರು ಶಾಂತಕುಮಾರ್ ಮಾತನಾಡಿ `ಈ ಜನವಿರೋಧಿ ಕಾಯ್ದೆಗೆ ರಾಜ್ಯಪಾಲರು ಸಹಿ ಹಾಕಬಾರದು. ಒಂದು ವೇಳೆ ಸಹಿ ಹಾಕಿದ್ದೆ ಆದಲ್ಲಿ ದೆಹಲಿ ರೈತರ ಮಾದರಿಯಲ್ಲಿ ಬೆಂಗಳೂರನ್ನೂ ಮುತ್ತಿಗೆ ಹಾಕಿ ಹೋರಾಟ ಮಾಡುತ್ತೇವೆ. ಮಾಜಿ ಸಿಎಂ ಕುಮಾರಸ್ವಾಮಿಯವರು ನಾಟಕ ನಿಲ್ಲಿಸಬೇಕು’ ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳು ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿಯಂತಹ ಕಾರ್ಪೊರೇಟ್ ಕಂಪನಿಗಳ ಪರವಾಗಿವೆ ಎಂದು ಆರೋಪಿಸಿದರು.

