ವಿಜಯಸಾಕ್ಷಿ ಸುದ್ದಿ, ಗದಗ
ವಿಷಕಾರಿ ಹಾವೊಂದು ಪ್ರತ್ಯಕ್ಷವಾಗಿ ಕೆಲಕಾಲ ಪೊಲೀಸರು ಆತಂಕಗೊಂಡ ಘಟನೆ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಠಾಣೆಯಲ್ಲಿ ಆರೋಪಿಗಳನ್ನು ಇಡುವ ಸೆಲ್ ಬಳಿಯ ಶೌಚಾಲಯದಲ್ಲಿ ಹುರುಪಂಜರ್ ಎಂಬ ವಿಷಕಾರಕ ಹಾವು ಪೇದೆಯೊಬ್ಬರಿಗೆ ಕಾಣಿಸಿಕೊಂಡಿದೆ. ಗಾಬರಿ ಬಿದ್ದ ಪೇದೆ ಎಲ್ಲ ಸಿಬ್ಬಂದಿಗೆ ಹೇಳಿದಾಗ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.
ತಕ್ಷಣವೇ ಸಮೀಪದಲ್ಲಿ ಇರುವ ಸ್ನೇಕ್ ರಹಮಾನ್ ಗೆ ಕರೆ ಮಾಡಿದ್ದಾರೆ. ಸ್ನೇಕ್ ರೆಹಮಾನ್ ಹಾಗೂ ಮಗ ತೌಶೀಫ್ ಇಬ್ಬರು ಕಾರ್ಯಚರಣೆ ನಡೆಸಿ ಹಾವು ಹಿಡಿದರು. ಸುಮಾರು ಅರ್ಧ ಗಂಟೆಗಳ ಕಾಲ ಕಾಡಿಸಿದ ಹಾವು ಕೊನೆಗೂ ಸ್ನೇಕ್ ರೆಹಮಾನ್ ಕೈಗೆ ಸಿಕ್ಕಿಬಿತ್ತು. ಹಾವು ಸಿಕ್ಕ ನಂತರ ಸಿಬ್ಬಂದಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಈ ಕುರಿತು ವಿಜಯಸಾಕ್ಷಿ ಗೆ ಮಾಹಿತಿ ನೀಡಿರುವ ಸ್ನೇಕ್ ರೆಹಮಾನ್, ಈ ಹಾವು ಸುಮಾರು ದಿನಗಳಿಂದ ಶೌಚಾಲಯದಲ್ಲಿ ನೆಲೆಸಿತ್ತು. ಆದರೆ ಯಾರ ಗಮನಕ್ಕೂ ಬಂದಿಲ್ಲ. ಆದರೆ ಇವತ್ತು ರಾತ್ರಿ ಹೊರಗೆ ಬಿದ್ದಿದ್ದರಿಂದ ಪೊಲೀಸರ ಕಣ್ಣಿಗೆ ಬಿದ್ದಿದೆ. ಕರೆ ಬಂದ ತಕ್ಷಣವೇ ಹಾಜರಾಗಿ ಹಾವು ಹಿಡಿದು ನರೇಗಲ್ ರಸ್ತೆಯ ಎಕ್ಕಿಹಳ್ಳದ ಸರುವಿನಲ್ಲಿ ಸುರಕ್ಷಿತವಾಗಿ ಬಿಡಲಾಗಿದೆ ಎಂದರು.