ಬೆಣ್ಣೆಹಳ್ಳದ ನಡುನೀರಿನಲ್ಲಿ ಸಿಲುಕಿದ್ದ ಕಾರ್ಮಿಕನ ರಕ್ಷಣೆ

0
Spread the love

ವಿಜಯಸಾಕ್ಷಿ ಸುದ್ದಿ, ನವಲಗುಂದ:

Advertisement

ಸತತ ಮೂರು ದಿನದಿಂದ ಮುಂಗಾರು ಪೂರ್ವದಲ್ಲಿಯೇ ಧಾರವಾಡ ಜಿಲ್ಲೆಯಾದ್ಯಂತ ಸುರಿದ ಮಳೆಯಿಂದ ಬೆಣ್ಣೆಹಳ್ಳ ಉಕ್ಕಿ ಹರಿಯುತ್ತಿದ್ದು, ತಾಲ್ಲೂಕಿನ ಕಡದಳ್ಳಿ ಗ್ರಾಮದ ಬಳಿ  ಪ್ರವಾಹದಲ್ಲಿ ಸಿಲುಕಿದ್ದ ಆಂದ್ರ ಮೂಲಕ ಕಾರ್ಮಿಕನೊಬ್ಬನನ್ನು ರಕ್ಷಣೆ ಮಾಡುವಲ್ಲಿ ತಾಲ್ಲೂಕಾ ಆಡಳಿತ ಶನಿವಾರ ಯಶಸ್ವಿಯಾಗಿದೆ.

ಆಂದ್ರ ಮೂಲದ ಕಾರ್ಮಿಕನಾದ ಮದನ್ ರೆಡ್ಡಿ (29) ಈತ ಕೆಲಸ ಹುಡುಕಿಕೊಂಡು ಹೊಲಕ್ಕೆ ಹೋಗಿದ್ದ. ಈತನಿಗೆ ಈ ಭಾಗದಲ್ಲಿ ಬೆಣ್ಣೆ ಹಳ್ಳದ ಪ್ರವಾಹ ಹೇಗಿರುತ್ತದೆ ಎಂಬುದು ಗೊತ್ತಾಗದೇ ಹೊಲದ ಶೆಡ್ಡೊಂದರಲ್ಲಿ ರಕ್ಷಣೆ ಪಡೆದು ನಿಂತಿದ್ದಾನೆ.  ಆದರೆ ಒಮ್ಮಿಂದೊಮ್ಮೆಲೆ ಬೆಣ್ಣೆಹಳ್ಳದ ಪ್ರವಾಹ ಹೆಚ್ಚಾಗಿ ಕೆಲಸ ಮಾಡುತ್ತಿದ್ದ ಹೊಲ ನಡುಗಡ್ಡೆಯಾಗಿದೆ. ಈತ ಭಯದಿಂದ ಜೋರಾಗಿ ಕೂಗಿಕೊಂಡಿದ್ದನ್ನು ಗ್ರಾಮಸ್ಥರು ಕೆಳಿಸಿಕೊಂಡು ತಾಲ್ಲೂಕಾ ಆಡಳಿತಕ್ಕೆ ಸುದ್ದಿ ಮುಟ್ಟಿಸಿದ್ದಾರೆ.

ಸ್ಥಳಕ್ಕೆ ತಹಶೀಲ್ದಾರ್ ಅನಿಲ ಬಡಿಗೇರ, ಸಿ.ಪಿ.ಐ ಚಂದ್ರಶೇಖರ ಮಠಪತಿ ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಗ್ನಿಶಾಮಕ ದಳಕ್ಕೆ ಸುದ್ದಿ ಮುಟ್ಟಿಸಿದ ಮೇಲೆ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಆಗಮಿಸಿದ ರಕ್ಷಣಾ ಸಿಬ್ಬಂದಿ ಸತತ ಮೂರು ಗಂಟೆಗಳ ಕಾರ್ಯಾಚರಣೆ ನಡೆಸಿ ಕಾರ್ಮಿಕನನ್ನು ರಕ್ಷಣೆ ಮಾಡಿ ಸಂಜೆ ಯಶಸ್ವಿಯಾಗಿ ಕರೆ ತಂದಿದ್ದರಿಂದ ರಕ್ಷಣೆಯಲ್ಲಿ ತೊಡಗಿದ್ದ ಎಲ್ಲರೂ ನಿಟ್ಟುಸಿರು ಬಿಡುವಂತಾಯಿತು.

ಈ ಸಂದರ್ಭದಲ್ಲಿ ಅಲ್ಲಿಯೇ ಉಪಸ್ಥಿತರಿದ್ದ ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಕಾರ್ಮಿಕನ ಜೊತೆ ಮಾತನಾಡಿ, ತಕ್ಷಣವೇ ಈತನಿಗೆ ಪ್ರಾಥಮಿಕ ಚಿಕಿತ್ಸೆ ಕೊಡುವಂತೆ ಸೂಚಿಸಿದ್ದರಿಂದ ಸ್ಥಳದಲ್ಲಿಯೇ ಇದ್ದ ಅಂಬ್ಯುಲೆನ್ಸನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನವಲಗುಂದ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡುತ್ತಿದ್ದಾರೆ.


ತುಂಬಾ ಹಸಿದುಕೊಂಡಿದ್ದ ಆತನಿಗೆ ವೈದ್ಯಾಧಿಕಾರಿಗಳು ಮೊದಲು ಊಟ ಕೊಟ್ಟು ಉಪಚರಿಸುತ್ತಿದ್ದಾರೆ. ಈತನಿಗೆ ಕನ್ನಡ ಭಾಷೆ ಬರದೆ ಇರುವುದು ಸ್ವಲ್ಪ ತೊಂದರೆಯಾಗುತ್ತಿದೆ.


Spread the love

LEAVE A REPLY

Please enter your comment!
Please enter your name here