ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ
ಅತಿವೃಷ್ಟಿ, ಅನಾವೃಷ್ಟಿ, ರೋಗಬಾಧೆ ಏನೆಲ್ಲ ಸಂಕಷ್ಟಗಳಿದ್ದರೂ ವಿಘ್ನನಾಶಕ ತನ್ನ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಮಾಡಿಸಿಕೊಳ್ಳುತ್ತಾನೆ ಎಂಬ ಸಾರ್ವತ್ರಿಕ ಮಾತಿನಂತೆ ಈ ವರ್ಷ ಅತಿವೃಷ್ಟಿಯಿಂದ ರೈತರು ಸಂಕಷ್ಟದಲ್ಲಿದ್ದರೂ ಗಣೇಶ ಚತುರ್ಥಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಸಜ್ಜಾಗಿದ್ದಾರೆ.
ಹಬ್ಬದ ಮುನ್ನಾದಿನ ಮಂಗಳವಾರ ಜನತೆ ಪಟ್ಟಣದ ಮಾರ್ಕೆಟ್‌ನಲ್ಲಿ ಹೂವು, ಹಣ್ಣು, ತಳಿರು-ತೋರಣ, ದಿನಸಿ, ಅಲಂಕಾರಿಕ ಮತ್ತು ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದು ಕಂಡು ಬಂದಿತು.
ಮಂಗಳವಾರ ಬೆಳ್ಳಂಬೆಳಿಗ್ಗೆಯೇ ೩ ಗಂಟೆಗಳ ಕಾಲ ಕುಂಭದ್ರೋಣ ಮಳೆ ಸುರಿದು ಹಬ್ಬದ ವಾತಾವರಣಕ್ಕೆ ಮಂಕು ಕವಿದಂತಾಗಿತ್ತು. ಮದ್ಯಾಹ್ನದ ವೇಳೆಗೆ ಬಿಸಿಲು ಬಿದ್ದಿದ್ದರಿಂದ ವ್ಯಾಪಾರ-ವಹಿವಾಟು ಚೆನ್ನಾಗಿ ನಡೆದವು. ಪರಿಸರಸ್ನೇಹಿ ಗಣೇಶ ಮೂರ್ತಿ, ಹೂವು, ಹಣ್ಣು, ತಳಿರು ತೋರಣ, ಅಲಂಕಾರಿಕ ವಸ್ತುಗಳು, ಪಟಾಕಿ ವ್ಯಾಪಾರ ಕೊಂಚ ಜೋರಾಗಿಯೇ ಕಂಡು ಬರುತ್ತಿದೆ.
ಹಣ್ಣುಗಳ ವ್ಯಾಪಾರಸ್ಥರು ಡಜನ್ ಬಾಳೆ, ೨ ಸೇಬು, ಕಿತ್ತಳೆ, ಚಿಕ್ಕೂ, ಮೋಸಂಬಿ ಸೇರಿ ಒಟ್ಟು ೫ ತರಹದ ಹಣ್ಣುಗಳ ಸೆಟ್‌ಗೆ ೧೫೦-೨೦೦ ರೂ.ವರೆಗೆ ಮಾರಾಟ ಮಾಡಿದರು. ದಿನಸಿ, ಅಲಂಕಾರಿಕ ವಸ್ತುಗಳು, ಹೂವು, ಬಾಳೆ, ಕಬ್ಬುಗಳ ಬೆಲೆ ಹೆಚ್ಚಳವಾಗಿದ್ದರೂ ಜನರು ಖರೀದಿಸುತ್ತಿರುವುದು ಕಂಡುಬಂತು.