ಲಾಕ್‌ಡೌನ್ ಹಿನ್ನೆಲೆ ಶುಭಕಾರ್ಯಗಳಿಲ್ಲದೆ ಹೂವುಗಳಿಗೆ ಬೇಡಿಕೆಯಿಲ್ಲ!
ವಿಜಯಸಾಕ್ಷಿ ಸುದ್ದಿ, ಗದಗ
ಹೂವಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಇಲ್ಲದ ಕಾರಣಕ್ಕೆ ರೈತರೊಬ್ಬರು ಟ್ರ್ಯಾಕ್ಟರ್ ಮೂಲಕ ಹೂವಿನ ಬೆಳೆಯನ್ನೇ ಹರಗಿರುವ ಘಟನೆ ನಡೆದಿದೆ. ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಹೂವು ಕೇಳುವವರೇ ಇಲ್ಲದಂತಾಗಿದೆ. ಹೀಗಾಗಿ ಹೂವು ಬೆಳೆದ ರೈತರು ಸಂಕಷ್ಟಕ್ಕೆ ಮುಳುಗಿದ್ದಾರೆ. ತಾಲೂಕಿನ ಸಂಭಾಪುರ ಗ್ರಾಮದ ರೈತ ಕಿರಣಗೌಡ ಬಂಡಿ ಎಂಬುವರು ತಮ್ಮ ಮೂರು ಎಕರೆ ಭೂಮಿಯಲ್ಲಿ ಬೆಳೆದಿದ್ದ ಸೇವಂತಿ ಹೂವಿನ ಬೆಳೆಯನ್ನು ಹರಗಿದ್ದಾರೆ.
ಕಳೆದ ಬಾರಿಯೂ ಹೂವಿಗೆ ಭರ್ಜರಿ ಬೆಲೆ ಸಿಗುತ್ತದೆ ಎಂಬ ಸಮಯದಲ್ಲಿಯೇ ಲಾಕ್‌ಡೌನ್ ಜಾರಿಯಾಗಿತ್ತು. ಆದರೆ, ಈ ಬಾರಿ ಹಾಗಾಗುವುದಿಲ್ಲ. ಕಳೆದ ಬಾರಿ ಲಾಕ್ ಡೌನ್ ಇದ್ದಿದ್ದರಿಂದಾಗಿ ಈ ಬಾರಿ ಹೆಚ್ಚಿನ ಶುಭ ಕಾರ್ಯಗಳು ನಡೆಯಲಿದ್ದು, ಭರ್ಜರಿ ಲಾಭ ಸಿಗಬಹುದು ಎಂದು ರೈತರು ಹೆಚ್ಚು ಖರ್ಚು ಮಾಡಿ ಹೂವು ಬೆಳೆದಿದ್ದರು. ಆದರೆ, ಈ ಸಮಯದಲ್ಲಿಯೂ ಲಾಕ್‌ಡೌನ್ ಜಾರಿಯಾಗಿದ್ದು ರೈತರು ಕಂಗಾಲಾಗಿದ್ದಾರೆ.
ಪರಿಹಾರ ಆಳಿನ ಖರ್ಚಿಗೂ ಸಾಲದು
ಈ ರೈತ 3 ಲಕ್ಷ ರೂ. ಖರ್ಚು ಮಾಡಿ ಹೂವು ಬೆಳೆ ಬೆಳೆದಿದ್ದರು. ಆದರೆ, ಅವರ ಹೂವು ಕೇಳುವವರೇ ಇಲ್ಲದಾಗಿದೆ. ಹೀಗಾಗಿ ಬೇಸರಗೊಂಡು ಹೂವಿನ ಬೆಳೆಯನ್ನೇ ಹರಗಿದ್ದಾರೆ. ಸರ್ಕಾರ ಹೂವು ಬೆಳೆಗಾರರ ನಷ್ಟ ತುಂಬಲು ಪರಿಹಾರ ಘೋಷಿಸಿದೆಯಾದರೂ ಅದು ನೀಡುವ 10 ಸಾವಿರ ರೂ. ಪರಿಹಾರ ಆಳಿನ ಖರ್ಚಿಗೂ ಆಗುವುದಿಲ್ಲ. ಸಾಲ ಮಾಡಿ ಬೆಳೆ ಬೆಳೆದಿದ್ದೇವೆ. ಲಕ್ಷಾಂತರ ರೂ. ಸಾಲ ಮಾಡಿದ್ದೇವೆ. ಹೀಗಾಗಿ ಸರ್ಕಾರೂ ಎಕರೆಗೆ ಸುಮಾರು 70 ಸಾವಿರ ರೂ.ಗಳಷ್ಟಾದರೂ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ.