ವಿಜಯಸಾಕ್ಷಿ ಸುದ್ದಿ, ನರಗುಂದ
ರಾಜ್ಯದಲ್ಲಿ ಮುಂಗಾರು ಮಳೆ ಭರ್ಜರಿಯಾಗಿ ಸುರಿಯುತ್ತಿದೆ. ಇದೇ ರೀತಿ ಬೆಳಗಾವಿ ಜಿಲ್ಲೆಯಲ್ಲಿ ಮಳೆ ವಿಪರೀತವಾಗಿ ಸುರಿಯುತ್ತಿರುವ ಪರಿಣಾಮ ಜಿಲ್ಲಾಡಳಿತವು ಜಿಲ್ಲೆಯ ಹಲವು ಗ್ರಾಮಗಳ ಜನರಿಗೆ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತವು ಲಕಮಾಪುರ ಗ್ರಾಮದಲ್ಲಿ ಸಭೆ ನಡೆಸಿದೆ. ನರಗುಂದ ತಹಸೀಲ್ದಾರ್ ಎ.ಡಿ. ಅಮರವಾಡಗಿ ನೇತೃತ್ವದಲ್ಲಿ ಗ್ರಾಮಸ್ಥರ ಸಭೆ ನಡೆಸಲಾಗಿದೆ.
ಬೆಳಗಾವಿ ಜಿಲ್ಲೆ ಹಾಗೂ ಮಲಪ್ರಭಾ ನದಿ ಜಲಾನಯನ ಪ್ರದೇಶದಲ್ಲಿ ವಿಪರೀತವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಇದೆ. ಅಲ್ಲದೇ, ನೀರಿನ ಹರಿವು ಹೆಚ್ಚಾಗಿ ನವಿಲು ತೀರ್ಥ ಡ್ಯಾಂ ನಿಂದ ನೀರು ಹರಿಬಿಟ್ಟರೆ ಲಕಮಾಪುರ ಗ್ರಾಮ ನಡುಗಡ್ಡೆಯಾಗುತ್ತದೆ. ಹೀಗಾಗಿ ತಾಲೂಕು ಆಡಳಿತ ಮಾಹಿತಿ ನೀಡಿದ ತಕ್ಷಣ ಕಾಳಜಿ ಕೇಂದ್ರಕ್ಕೆ ಜನರನ್ನು ಸ್ಥಳಾಂತರಿಸಲು ವ್ಯವಸ್ಥೆ ಮಾಡಲಾಗಿದೆ.
ಒಂದು ವೇಳೆ ಪ್ರಾವಹ ಉಂಟಾದರೆ ಲಕಮಾಪುರ ಗ್ರಾಮದ ಜನರು ಬೆಳ್ಳೇರಿ ಗ್ರಾಮದ ಕಾಳಜಿ ಕೇಂದ್ರಕ್ಕೆ ಬರುವಂತೆ ತಹಸೀಲ್ದಾರ್ ಮನವಿ ಮಾಡಿದ್ದಾರೆ. ಈ ಕುರಿತು ತಹಸೀಲ್ದಾರ್ ನೇತೃತ್ವದಲ್ಲಿ ಗ್ರಾಮದಲ್ಲಿ ಸಭೆ ನಡೆದಿದೆ. ಈ ಸಭೆಯಲ್ಲಿ ತಾಪಂ ಇಓ, ನರಗುಂದ ಸಿಪಿಐ ಭಾಗವಹಿಸಿದ್ದರು.
ಈ ಹಿಂದೆಯೂ ಹಲವು ಬಾರಿ ಈ ಗ್ರಾಮ ಮಲಪ್ರಭಾ ನದಿಯ ಪ್ರವಾಹಕ್ಕೆ ಸಿಲುಕಿತ್ತು. ಇಡೀ ಗ್ರಾಮದ ಸುತ್ತಮುತ್ತ ನೀರು ಆವರಿಸಿ ಗ್ರಾಮ ನಡುಗಡ್ಡೆಯಂತಾಗಿತ್ತು. ಹೀಗಾಗಿ ತಾಲೂಕು ಆಡಳಿತ ಈ ಬಾರಿ ಎಚ್ಚರಿಕೆ ವಹಿಸಿದೆ. ಮಲಪ್ರಭಾ ನದಿಯಲ್ಲಿ ಪ್ರವಾಹ ಉಂಟಾದ ಸಂದರ್ಭದಲ್ಲಿ ಈ ಗ್ರಾಮವೇ ಮೊದಲಿಗೆ ತೊಂದರೆ ಅನುಭವಿಸುವುದು.