ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಜಿಲ್ಲೆಯ ಹೊಸ ಪ್ರವಾಹ ಪೀಡಿತ ತಾಲೂಕುಗಳಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ನೆರೆ ಮತ್ತು ಮಳೆಗೆ ಹಾನಿಯುಂಟಾಗಿರುವ ಕುರಿತು ಜಂಟಿ ಬೆಳೆ ಸಮೀಕ್ಷೆ ಕೈಗೊಂಡು ಶೀಘ್ರವೇ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು. ಸರ್ಕಾರದಿಂದ ಸಿಗುವ ಪರಿಹಾರವನ್ನು ರೈತರಿಗೆ ಸಕಾಲಕ್ಕೆ ಸಿಗುವಂತೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ನಿರ್ದೇಶನ ನೀಡಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಂಟಿ ಬೆಳೆ ಸಮೀಕ್ಷೆ ಮತ್ತು ಬೆಳೆ ಸಮೀಕ್ಷೆ ಮತ್ತು ಬೆಳೆ ವಿಮೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಂಗಾರು ಹಂಗಾಮಿನಲ್ಲಿ ಆಗಷ್ಟ್ ಹಾಗೂ ಸೆಪ್ಟಂಬರ್ ತಿಂಗಳಲ್ಲಿ ಸುರಿದ ಹೆಚ್ಚಿನ ಮಳೆಯಿಂದಾಗಿ ಜಿಲ್ಲೆಯ ಏಳು ತಾಲೂಕುಗಳನ್ನು ಅತಿವೃಷ್ಠಿ ಹಾಗೂ ಪ್ರವಾಹ ಪೀಡಿತ ಪ್ರದೇಶಗಳೆಂದು ಸರ್ಕಾರ ಘೋಷಿಸಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದ ಹಾನಿ ಆಗಿರುವ ಪ್ರದೇಶಗಳಿಗೆ ಸಂಬಂಧಿಸಿದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು. ಅಲ್ಲದೇ, ಜಂಟಿ ಬೆಳೆ ಸಮೀಕ್ಷಾ ಕಾರ್ಯವನ್ನು ತ್ವರಿತವಾಗಿ ಮುಕ್ತಾಯಗೊಳಿಸಿ ಬೆಳೆ ಹಾನಿಯ ಬಗ್ಗೆ ಪರಿಹಾರ ಪೋರ್ಟಲ್ನಲ್ಲಿ ನಮೂದಿಸಬೇಕು ಎಂದರು.
ತೋಟಗಾರಿಕೆ ಬೆಳೆಗಳಾದ ಈರುಳ್ಳಿ ಹಾಗೂ ಮೆಣಸಿನಕಾಯಿ ಬೆಳೆಗಳು ಹೆಚ್ಚು ಹಾನಿಗೊಳಗಾಗಿವೆ. ಹೀಗಾಗಿ ಜಂಟಿ ಸಮೀಕ್ಷೆ ಕಾರ್ಯದಲ್ಲಿ ಯಾವ ರೈತರು ಬಿಟ್ಟು ಹೋಗದಂತೆ ಸಮೀಕ್ಷೆ ಕಾರ್ಯ ಕೈಗೊಳ್ಳಬೇಕು. ಈಗಾಗಲೇ ಬೆಳೆ ವಿಮೆ ತುಂಬಿರುವ ರೈತರ ಬೆಳೆ ಮಳೆಗೆ ಹಾಳಾಗಿದ್ದರೆ ಅರ್ಜಿ ಸಲ್ಲಿಸಬೇಕು. ಈ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರುದ್ರೇಶಪ್ಪ ಮಾತನಾಡಿ, ಜಿಲ್ಲೆಯಲ್ಲಿ ಶೇ. 99.2 ರಷ್ಟು ಬೆಳೆ ಸಮೀಕ್ಷಾ ಕಾರ್ಯ ಪೂರ್ಣಗೊಂಡಿದೆ. ರೈತರು ಮಾಡಿರುವ ಸಮೀಕ್ಷೆಯಲ್ಲಿ 13,350 ಮರಳಿ ಸರ್ವೇ ಮಾಡಿದೆ. ಬೆಳೆ ಸಮೀಕ್ಷೆ ಕುರಿತು ಸಲ್ಲಿಕೆ ಆಗಿದ್ದ ಸುಮಾರು 396 ಆಕ್ಷೇಪಣಾ ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗಿದೆ. ಜಿಲ್ಲೆಯಾದ್ಯಂತ ಒಟ್ಟು 74 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಆಗಿದ್ದು, ಪ್ರತಿ ಎಕರೆಗೆ 15 ರಿಂದ 20 ಕ್ವಿಂಟಾಲ್ ಇಳುವರಿ ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.
ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಕಂದಾಯ ಇಲಾಖೆಯ ಅಧಿಕಾರಿಗಳು, ಲೀಡ್ ಬ್ಯಾಂಕ್ ಮುಖ್ಯಸ್ಥರು, ವಿಮಾ ಕಂಪನಿಯ ಪ್ರತಿನಿಧಿಗಳು ಸೇರಿದಂತೆ ಇತರರು ಸಭೆಯಲ್ಲಿ ಇದ್ದರು.
ಬೆಳೆ ಸಮೀಕ್ಷಾ ಕಾರ್ಯ ಪೂರ್ಣಗೊಳಿಸಿ
Advertisement