ವಿಜಯಸಾಕ್ಷಿ ಸುದ್ದಿ, ಬೆಂಗಳೂರು
- ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಒಂಭತ್ತು ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ದಾಳಿ
ಬೆಳ್ಳಂಬೆಳಿಗ್ಗೆಯೇ ರಾಜ್ಯದ 40 ಕಡೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು 9 ಭೃಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ಒಟ್ಟು 300 ಎಸಿಬಿ ಅಧಿಕಾರಿಗಳು ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿದ್ದಾರೆ.
ಬಳ್ಳಾರಿಯ ಎಲೆಕ್ಟ್ರಿಕಲ್ ಇನ್ಸ್ ಪೆಕ್ಟರ್ ಎ.ಎನ್.ವಿಜಯ್ ಕುಮಾರ್ ಅವರ ಅಹಂಬಾವಿಯಲ್ಲಿನ
ಮನೆ ಮೇಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಡಿವೈಎಸ್ಪಿ ಸೂರ್ಯನಾರಾಯಣ ನೇತೃತ್ವದಲ್ಲಿ ವಿಜಯ್ ಅವರ ಮನೆ ಹಾಗೂ ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
8ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಓರ್ವ ವಿಡಿಯೋಗ್ರಾಫರ್ ಜೊತೆಗೆ ಬೆಂಗಳೂರಿನಿಂದ ಆಗಮಿಸಿರುವ ಎಸಿಬಿ ಅಧಿಕಾರಿಗಳು ದಾಳಿಯ ಇಂಚಿಂಚೂ ವಿಡಿಯೋ ಫೋಟೊ ಶೂಟ್ ಮಾಡಿಕೊಳ್ಳುತ್ತಿದ್ದಾರೆ. ದಾಳಿಯಲ್ಲಿ ಸ್ಥಳೀಯ ಎಸಿಬಿ ಅಧಿಕಾರಿಗಳನ್ನು ಬಳಸಿಕೊಳ್ಳದಿರುವುದು ವಿಶೇಷ.
ಕೋಲಾರದ ಮಾಲೂರು ಯೋಜನಾ ಪ್ರಾಧಿಕಾರದ ಸಹಾಯಕ ನಿರ್ದೇಶಕ ಎಚ್.ಆರ್. ಕೃಷ್ಣಪ್ಪ ಅವರ ಬೆಂಗಳೂರಿನ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ.
ಎಚ್.ಆರ್. ಕೃಷ್ಣಪ್ಪ ಮಾಲೂರಿನಲ್ಲಿ ಕಳೆದ 3 ತಿಂಗಳಿಂದ ಕರ್ತವ್ಯದಲ್ಲಿದ್ದಾರೆ.
ಮತ್ತೊಂದೆಡೆ ಬೀದರ್ ಜಿಲ್ಲೆಯ ಬಸವಕಲ್ಯಾಣದ ಜಿಪಂ ಜೆಇ ಸುರೇಶ್ ಮೋರೆ ಅವರಿಗೆ ಸೇರಿದ ಮೂರು ಸ್ಥಳಗಳ ಮೇಲೆ ಏಕಕಾಲಕ್ಕೆ ಕಲಬುರಗಿ ಎಸಿಬಿ ಎಸ್ಪಿ ಮಹೇಶ ಮೆಗ್ಗನ್ನವರ ಮಾರ್ಗದರ್ಶನದಲ್ಲಿ ಬೀದರ ಎಸಿಬಿ ಡಿಎಸ್ಪಿ ಹಣಮಂತರಾಯ ಮತ್ತು ತಂಡ ದಾಳಿ ನಡೆಸಿದೆ. ಬಸವಕಲ್ಯಾಣದ ಶಿವಾಜಿ ನಗರದಲ್ಲಿರುವ ಮನೆ ಹಾಗೂ ಬಾಲ್ಕಿ ತಾಲೂಕಿನ ಮೆಹಕರ್ ನಲ್ಲಿರುವ ಪೆಟ್ರೊಲ್ ಬಂಕ್
ಹಾಗೂ ಮನೆಯ ಮೇಲೆ ದಾಳಿ ನಡೆಸಿ ತಪಾಸಣೆ ಆರಂಭಿಸಿದ್ದಾರೆ.