ಬೊಮ್ಮಾಯಿ ಸಿಎಂ ಸ್ಥಾನದಿಂದ ಕೆಳಗಿಳಿಯೊ ಸಾಧ್ಯತೆ: ಜಾರಕಿಹೊಳಿ

0
Spread the love

ಮೇಕೆದಾಟು ಪಾದಯಾತ್ರೆ ಮುಂದುವರಿಯುತ್ತೆ

Advertisement

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರ ಬಂದ ಪ್ರತಿ ಸಲವೂ ಮೂವರು ಸಿಎಂ ಆಗಿರ‌್ತಾರೆ. ಈ ಸಲ ಬೊಮ್ಮಾಯಿಯವರು ಎರಡನೇ ಸಿಎಂ ಆಗಿದ್ದು, ಸರಕಾರದ ಅವಧಿ ಮುಗಿಯುವುದರೊಳಗೆ ಮತ್ತೊಬ್ಬರು ಸಿಎಂ ಆಗುವ ಸಾಧ್ಯತೆ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

ಕೊಪ್ಪಳದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹೈಕಮಾಂಡ್ ಬೊಮ್ಮಾಯಿಯವರಿಗೆ ಆರು ತಿಂಗಳು ಟೈಮ್ ಕೊಟ್ಟಿತ್ತು. ಈಗ ಬಸವರಾಜ ಬೊಮ್ಮಾಯಿಯವರು ಸಿಎಂ ಆಗಿ ಆರು ತಿಂಗಳು ಮುಗಿದಿದ್ದು ಸಿಎಂ ಬದಲಾವಣೆ ಬಗ್ಗೆ ಸ್ವತಃ ಬಿಜೆಪಿಯವರೇ ಮಾತನಾಡುತ್ತಿದ್ದಾರೆ ಎಂದರು.

ಸಿ.ಎಂ.ಇಬ್ರಾಹಿಂ, ನಾನು ಸೇರಿದಂತೆ ಕಾಂಗ್ರೆಸ್‌ನ ಎಲ್ಲರೂ ಪಕ್ಷದಲ್ಲೇ ಇದ್ದಾರೆ. ಸೆಕ್ಯುಲರ್ ಶಕ್ತಿ‌ ಉಳಿಸಲು ಇಬ್ರಾಹಿಂ ದಳದಿಂದ ಕಾಂಗ್ರೆಸ್‌ಗೆ ಬಂದವರು. ಅವರಿಗೆ ಒಂದಿಷ್ಟು ಅಸಮಾಧಾನ‌ ಇರಬಹುದು. ಹಾಗಂತ ಕಾಂಗ್ರೆಸ್‌ನಿಂದ ಅವರು ದೂರ ಆಗಿಲ್ಲ, ರಾಜಕೀಯವೂ ಕೊನೆಯಾಗಿಲ್ಲ ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್ ಅನ್ನೋದು ಎಸ್ ಎಸ್ (ಸಿದ್ದರಾಮಯ್ಯ, ಶಿವಕುಮಾರ್) ಪಕ್ಷ ಎಂಬ ಸಚಿವ ಶ್ರೀ ರಾಮುಲು ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯಲ್ಲೂ ಒಂದು ಆರ್‌ಎಸ್ಎಸ್ ಬಣ ಹಾಗೂ ಯಡಿಯೂರಪ್ಪ ಬಣ ಇದೆ. ಎಲ್ಲ ಪಕ್ಷಗಳಲ್ಲಿ ಇರುವಂತೆ ಕಾಂಗ್ರೆಸ್‌ನಲ್ಲೂ ಒಂದಷ್ಟು ಭಿನ್ನಾಭಿಪ್ರಾಯಗಳು ಇರಬಹುದು‌ ಎಂದು ಹೇಳಿದರು.

ಈಗಾಗಲೇ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜನರು ಉತ್ತರ ಕೊಟ್ಟಿದ್ದಾರೆ. ಪರಿಷತ್ ಚುನಾವಣೆಯಲ್ಲಿ ಮುಳುಗುತ್ತಿರುವ ಹಡಗು ಯಾವ ಪಕ್ಷ ಎಂಬುದನ್ನು ತೋರಿಸಿದ್ದಾರೆ ಎಂದ ಸತೀಶ್ ಜಾರಕಿಹೊಳಿ, ಮೇಕೆದಾಟು ಪಾದಯಾತ್ರೆ ಕೋವಿಡ್ ಕಾರಣದಿಂದ ತಾತ್ಕಾಲಿಕವಾಗಿ ಸ್ಥಗಿತವಾಗಿದೆಯೇ ಹೊರತು ಶಾಶ್ವತವಾಗಿ ಪಾದಯಾತ್ರೆ ನಿಂತಿಲ್ಲ. ಮೇಕೆದಾಟು ಪಾದಯಾತ್ರೆಗೆ ಶೀಘ್ರದಲ್ಲೇ ಮರುಚಾಲನೆ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಕೊಪ್ಪಳ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಸಚಿವ ಶಿವರಾಜ ತಂಗಡಗಿ, ಶಾಸಕ ರಾಘವೇಂದ್ರ ಹಿಟ್ನಾಳ, ಜಿಪಂ ಮಾಜಿ ಅಧ್ಯಕ್ಷ ರಾಜಶೇಖರ ಹಿಟ್ನಾಳ ಮತ್ತಿತರರು ಇದ್ದರು.


Spread the love

LEAVE A REPLY

Please enter your comment!
Please enter your name here