ವಿಜಯಸಾಕ್ಷಿ ಸುದ್ದಿ, ಗದಗ
ಬ್ಯಾಂಕ್ ಮ್ಯಾನೇಜರ್ ಒಬ್ಬರ ಮನೆಗೆ ಇಬ್ಬರು ವ್ಯಕ್ತಿಗಳು ರಾತ್ರಿವೇಳೆ ನುಗ್ಗಿ ಹಣ ಡ್ರಾ ಮಾಡಿಕೊಡುವಂತೆ ದರ್ಪ ತೋರಿದ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಬಾಲೆಹೊಸೂರು ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಜನವರಿ 15 ರ ರಾತ್ರಿ ಬಾಲೆಹೊಸೂರಿನ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ಹನುಮಂತಪ್ಪ ಫಕ್ಕೀರಪ್ಪ ದೊಡ್ಡಮನಿ ಎಂಬುವವರು ಇದ್ದ ಮನೆಗೆ ನುಗ್ಗಿದ ನಾಗರಾಜ್ ಭರಮಪ್ಪ ಚಿಗರಿ ಹಾಗೂ ಸ್ನೇಹಿತ ನವೀನಕುಮಾರ ಬಸವಣ್ಣೆಪ್ಪ ಕಡೆಮನಿ, ಬ್ಯಾಂಕ್ ಮ್ಯಾನೇಜರ್ ಹನುಮಂತಪ್ಪ ದೊಡ್ಡಮನಿ ಮೇಲೆ ಹಲ್ಲೆ ಮಾಡಿ ಈಗಲೇ ಹಣ ಡ್ರಾ ಮಾಡಿಕೊಡುವಂತೆ ಜೀವ ಬೆದರಿಕೆ ಹಾಕಿದ್ದಾರೆ. ಈ ಕುರಿತು ಲಕ್ಷ್ಮೇಶ್ವರ ಪೊಲೀಸರಿಗೆ ದೂರು ನೀಡಿದಾಗ ಪ್ರಕರಣ ದಾಖಲು ಮಾಡಿಕೊಳ್ಳಲು ಹಿಂದೆ ಮುಂದೆ ನೋಡಿದ್ದರು. ಕೊನೆಗೂ ಕಾಟಾಚಾರದ ಎಫ್ಐಆರ್ ಹಾಕಿ ಜಾಮೀನು ಸಿಗುವಂತೆ ನೋಡಿಕೊಂಡಿದ್ದರು.
ಈ ಪ್ರಕರಣದಿಂದ ಪಾಠ ಕಲಿಯದ ಆರೋಪಿಗಳ ಪೈಕಿ ನವೀನಕುಮಾರ ಕಡೆಮನಿ ಎಂಬಾತ ಮತ್ತೆ ಜನವರಿ 20 ರಂದು ಬ್ಯಾಂಕ್ ಗೆ ನುಗ್ಗಿ ಪೊಲೀಸ್ ಕಂಪ್ಲೀಟ್ ಕೊಟ್ಟಿದ್ದಕ್ಕೆ ಸಿಟ್ಟಾಗಿ ಮ್ಯಾನೇಜರ್ ಹನುಮಂತಪ್ಪ ಅವರ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾನೆ.
ಬ್ಯಾಂಕಿನ ಇತರ ಸಿಬ್ಬಂದಿಗಳು ಜಗಳ ಬಿಡಿಸಲು ಬಂದಾಗ ಅವರ ಮೇಲೂ ಹಲ್ಲೆ ಮಾಡಿ ಮ್ಯಾನೇಜರ್ ಇದ್ದ ಕಡೆ ಕುರ್ಚಿ ಎತ್ತಿ ಹಾಕಿದ್ದಾನೆ. ಇದರಿಂದಾಗಿ ಬ್ಯಾಂಕ್ ನ ಗ್ಲಾಸ್ ಗಳು ಪುಡಿಪುಡಿಯಾದವು. ಅಷ್ಟಕ್ಕೇ ಸುಮ್ಮನಾಗದ ಆರೋಪಿ ನವೀನಕುಮಾರ, ಖಾತೆಯಲ್ಲಿನ ಹಣ ಈಗಲೇ ಡ್ರಾ ಮಾಡಿಕೊಡಿ ಎಂದು ದಮಕಿ ಹಾಕಿದ್ದಾನೆ.
ಈ ಘಟನೆಯಿಂದಾಗಿ ಬ್ಯಾಂಕಿನ ಸಿಬ್ಬಂದಿ, ಸಾರ್ವಜನಿಕರು ಬೆಚ್ಚಿಬಿದ್ದು ಪೊಲೀಸರಿಗೆ ಮಾಹಿತಿ ನೀಡಿದಾಗ ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ನವೀನಕುಮಾರನನ್ನು ವಶಕ್ಕೆ ಪಡೆದು ಬ್ಯಾಂಕ್ ಮ್ಯಾನೇಜರ್ ಹನುಮಂತಪ್ಪ ಕೊಟ್ಟ ದೂರಿನ ಮೇರೆಗೆ ಸದ್ಯಕ್ಕೆ ಹೊರಬರದಂತಹ ವಿವಿಧ ಕಲಂಗಳ ಹಾಕಿ ಜೈಲು ಕಂಬಿ ಎಣಿಸುವಂತೆ ಮಾಡಿದ್ದಾರೆ.
ಲಕ್ಷ್ಮೇಶ್ವರ ಪೊಲೀಸರು ಮೊದಲ ಪ್ರಕರಣದಲ್ಲಿ ಈ ರೀತಿ ಮಾಡಿದ್ದರೇ ಮತ್ತೊಮ್ಮೆ ಗಲಾಟೆ ಆಗುತ್ತಿರಲಿಲ್ಲ ಎಂದು ಜನ ಹೇಳುತ್ತಿದ್ದಾರೆ.
ಅಂತೂ ಇಂತೂ ಪೊಲೀಸರ ಉದಾಸೀನ ಎಂತಹ ಅನಾಹುತಕ್ಕೆ ಕಾರಣವಾಗಬಲ್ಲದು ಅನ್ನೋದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.