ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ರಾಜ್ಯದಲ್ಲಿ ಚೀನಾ ವೈರಸ್ ತಡೆಗಟ್ಟಿದ ಬೆನ್ನಲ್ಲೇ ಮತ್ತೊಂದು ಬ್ರಿಟನ್ ಹೈಸ್ಪೀಡ್ ಕೊರೋನಾ ವೈರಸ್ ತಡೆಗಟ್ಟಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಪ್ರಕಟಿಸಿದ್ದು, ರಾತ್ರಿ ಕರ್ಪ್ಯೂ ಜಾರಿ ಮಾಡಿದೆ.
ಇದರಿಂದ ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ತುರ್ತು ಸೇವೆ ಹೊರತುಪಡಿಸಿ ಇನ್ನುಳಿದ ಎಲ್ಲಾ ಸೇವೆಗಳು ಬಂದ್ ಆಗಿರಲಿವೆ. ರಾಜ್ಯದಲ್ಲಿ ಬಿಎಂಟಿಸಿ, ಕೆಎಸ್ ಆರ್ ಟಿಸಿ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಲಿದೆ.
ಶಾಲಾ- ಕಾಲೇಜು ಆರಂಭದ ಬಗ್ಗೆ ಸಿಎಂ ಯಡಿಯೂರಪ್ಪ ಹಾಗೂ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಕಳೆದ ಡಿ.19 ರಂದು ಜನವರಿ 1 ರಿಂದ 10 ಮತ್ತು 12ನೇ ವಿದ್ಯಾರ್ಥಿಗಳಿಗೆ ತರಗತಿಗಳನ್ನು ಪ್ರಾರಂಭಿಸಲಾಗುವುದು. ಅದರಂತೆ ಜ.1 ರಿಂದ 6 ರಿಂದ 9 ತರಗತಿ ಮಕ್ಕಳಿಗೆ ವಿದ್ಯಾಗಮ ತರಗತಿಗಳನ್ನು ಪುನರಾರಂಭಿಸಲಾಗುವುದು ಎಂದು ತಿಳಿಸಿದ್ದರು.
ಇದೀಗ ಬ್ರಿಟನ್ ಹೈಸ್ಪೀಡ್ ಕೊರೋನಾ ವೈರಸ್ ಹಾವಳಿ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಶಾಲಾ- ಕಾಲೇಜು ಪುನರಾರಂಭದ ಬಗ್ಗೆ ಸರ್ಕಾರ ಇನ್ನೂ ಎರಡು ದಿನಗಳವರೆಗೆ ಕಾದು ನೋಡುವ ನಿರ್ಧಾರಕ್ಕೆ ಬಂದಿದೆ. ಈ ಕುರಿತು ಡಿ.28 ರಂದು ಮತ್ತೊಂದು ಸುತ್ತಿನ ತಜ್ಞರ ಸಭೆ ನಡೆಸಿ ಶಾಲೆ ಆರಂಭದ ಕುರಿತು ತೀರ್ಮಾನ ಕೈಗೊಳ್ಳಲು ಸರ್ಕಾರ ಮುಂದಾಗಿದೆ.
ಹಾಗಾಗಿ ಜನವರಿ 1 ರಿಂದ ಶಾಲಾ ಕಾಲೇಜುಗಳು ಆರಂಭವಾಗುವುದು ಬಹುತೇಕ ಅನುಮಾನ ಎನ್ನಲಾಗುತ್ತಿದೆ.