ವಿಜಯಸಾಕ್ಷಿ ಸುದ್ದಿ, ನವದೆಹಲಿ
ಒಂದೇ ಮಾಸ್ಕ್ ನ್ನು 2 ರಿಂದ 3 ವಾರಗಳ ಕಾಲ ನಿರಂತರವಾಗಿ ಬಳಕೆ ಮಾಡುತ್ತಿದ್ದರೂ ‘ಬ್ಲ್ಯಾಕ್ ಫಂಗಸ್’ ಸೋಂಕು ತಗುಲುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ದೇಶದಲ್ಲಿ ಮಾರಕ ಸೋಂಕಿನ ಅಬ್ಬರ ಜೋರಾಗಿದೆ. ಇತ್ತ ಬ್ಲ್ಯಾಕ್ ಫಂಗಸ್ ಸೋಂಕಿನ ಅಬ್ಬರ ಕೂಡ ಜೋರಾಗುತ್ತಿದೆ. ಇದರ ನಡುವೆಯೇ ಈ ಬ್ಲಾಕ್ ಫಂಗಸ್ ನ ಮೂಲಗಳ ಕುರಿತು ತಜ್ಞರು ಒಂದೊಂದೇ ಮಾಹಿತಿ ಹೊರ ಹಾಕುತ್ತಿದ್ದಾರೆ. ಸದ್ಯ ಒಂದೇ ಮಾಸ್ಕ್ ನ್ನು ಸತತವಾಗಿ ಬಳಕೆ ಮಾಡುವುದರಿಂದ ಬ್ಲ್ಯಾಕ್ ಫಂಗಸ್ ಸೋಂಕು ತಗಲುವ ಸಾಧ್ಯತೆ ದಟ್ಟವಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಕೊರೊನಾ ಸೋಂಕಿನಿಂದ ಗುಣಮುಖರಾದವರಲ್ಲಿ ಹೆಚ್ಚಾಗಿ ಈ ಕಾಯಿಲೆ ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ಏಮ್ಸ್ ನ ನ್ಯೂರೋ ಸರ್ಜನ್ ವೈದ್ಯ ಡಾ. ಸರತ್ ಚಂದ್ರ, ಸತತ 2 ರಿಂದ 3 ವಾರಗಳ ಕಾಲ ಒಂದೇ ಮಾಸ್ಕನ್ನು ಧರಿಸುವುದರಿಂದಲೂ ಬ್ಲ್ಯಾಕ್ ಫಂಗಸ್ ಬರುತ್ತದೆ ಎಂದು ಹೇಳಿದ್ದಾರೆ.
ಅತಿಯಾದ ಸ್ಟಿರಾಯಿಡ್ ಬಳಕೆ, ಮೆಡಿಕಲ್ ಆಕ್ಸಿಜನ್ ಪಡೆದವರು ಸೋಂಕಿತರಾದ 6 ತಿಂಗಳುಗಳ ಒಳಗೆ ಬ್ಲ್ಯಾಕ್ ಫಂಗಸ್ ಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಎಂದು ಹೇಳಿದ್ದಾರೆ.
ಈ ಬ್ಲ್ಯಾಕ್ ಫಂಗಸ್ ಸೋಂಕು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗುತ್ತಿದೆ. ಹಿಂದೆಲ್ಲ ವರ್ಷಕ್ಕೆ 7 ಅಥವಾ 8 ಪ್ರಕರಣಗಳು ದಾಖಲಾಗುತ್ತಿದ್ದವು. ಆದರೆ, ಪ್ರತಿ ದಿನ ಸಾಕಷ್ಟು ಪ್ರಕರಣಗಳು ದಾಖಲಾಗುತ್ತಿವೆ. ರೋಗನಿರೋಧಕ ಶಕ್ತಿ ಇರುವವರಲ್ಲಿ ಸೋಂಕು ಹೆಚ್ಚಾಗಿ ಬಾಧಿಸುತ್ತಿದೆ.
ಮಧುಮೇಹ, ಬಿಪಿ, ಕಿಡ್ನಿ ಸಮಸ್ಯೆ, ಹೃದ್ರೋಗ ಸಮಸ್ಯೆಯಂತಹ ಅನಾರೋಗ್ಯದಿಂದ ಬಳಲುತ್ತಿರುವವರು ವೈದ್ಯರ ಸಲಹೆ ಇಲ್ಲದೇ ಸ್ಟಿರಾಯ್ಡ್ ಗಳನ್ನು ತೆಗೆದುಕೊಳ್ಳುತ್ತಿದ್ದರೆ, ಅವರಲ್ಲಿ ಕೂಡ ಸೋಕು ಬಹು ಬೇಗ ಹರಡುತ್ತದೆ ಎಂದು ಎಚ್ಚರಿಸಿದ್ದಾರೆ
ಅಲ್ಲದೇ, ಗಡ್ಡ ಹೊಂದಿರುವ ಜನರಿಗೆ ಈ ಮಾಸ್ಕ್ ಧರಿಸುವುದು ಕಷ್ಟಕರವಾಗಬಹುದು. ಮಾಸ್ಕ್ ಮುಖದ ಮೇಲೆ ಸರಿಯಾಗಿ ಹೊಂದಿಕೊಳ್ಳುವುದಿಲ್ಲ. ಮಾಸ್ಕ್ ಮುಖಕ್ಕೆ ಫಿಟ್ ಆಗಿ ಧರಿಸಬೇಕು ಎಂದು ವೈದ್ಯರು ಹೇಳಿದ್ದಾರೆ.