ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಬಹುಶಃ ಈ ಪಂದ್ಯವನ್ನು ಭಾರತೀಯರ ತಮ್ಮ ಮನದಾಳದಲ್ಲಿ ಅಚ್ಚಳಿಯದೆ ಉಳಿಸಿಕೊಂಡಿದ್ದಾರೆ. ಅಂತಹದೊಂದು ಜೊತೆಯಾಟವನ್ನು ಕನ್ನಡಿಗ ಹಾಗೂ ಭಾರತ ತಂಡದ ಗೋಡೆ ಎಂದೆ ಖ್ಯಾತಿಯಾಗಿದ್ದ ರಾಹುಲ್ ದ್ರಾವಿಡ್ ಹಾಗೂ ಇಂದಿನ ಐಸಿಸಿ ಅಧ್ಯಕ್ಷ ಸೌರವ್ ಗಂಗೂಲಿ ನೀಡಿದ್ದರು.
ಅದು 1999ರ ವಿಶ್ವಕಪ್. ಅಂದರೆ, ಇಂದಿಗೆ ಬರೋಬ್ಬರಿ 22 ವರ್ಷಗಳ ಹಿಂದೆ ನಡೆದ ಸಂದರ್ಭ.
ಈ ಇಬ್ಬರೂ ಆಟಗಾರರು ಭಾರತೀಯರಿಗೆ ರನ್ ಗಳ ರಾಶಿಯನ್ನೇ ಉಡುಗೊರೆಯಾಗಿ ನೀಡಿದ್ದರು. ಆಗ ವಿಶ್ವದಾಖಲೆ ನಿರ್ಮಿಸಿ ಬ್ಯಾಟ್ ಎತ್ತಿದ್ದರೆ, ನೂರು ಕೋಟಿ ಅಭಿಮಾನಗಳು ಚಪ್ಪಾಳೆ ತಟ್ಟಿ ಹುರಿದುಂಬಿಸಿದ್ದರು.
ಶ್ರೀಲಂಕಾ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಅವರು ಎರಡನೇ ವಿಕೆಟ್ ಗೆ ಜೊತೆಯಾಗಿದ್ದರು. ಆರಂಭಿಕ ಬ್ಯಾಟಿಂಗ್ ಮಾಡಿದ ಭಾರತ ತಂಡ ಕೇವಲ 6 ರನ್ ಗಳಿಸುವಷ್ಟರಲ್ಲಿಯೇ ಆರಂಭಕ ಆಟಗಾರ ಎಸ್. ರಮೇಶ್ ಅವರನ್ನು ಕಳೆದುಕೊಂಡು ಆತಂಕದಲ್ಲಿತ್ತು. ಚಾಮಿಂದ್ ವಾಸ್ ಎಸೆದ ಬೌಲ್ ಗೆ ಅವರು ಬೌಲ್ಡ್ ಆಗಿ ಫೆವಲೀಯನ್ ಹಾದಿ ಹಿಡಿದಿದ್ದರು. ಮೊದಲ ವಿಕೆಟ್ ಪತನವಾಗುತ್ತಿದ್ದಂತೆ ಈ ಪಂದ್ಯದಲ್ಲಿ ರನ್ ಹರಿಯುವುದು ಕಷ್ಟ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಆ ನಂತರ ನಡೆದದ್ದೇ ದಾಖಲೆ.
22 ವರ್ಷಗಳ ಹಿಂದೆ ಈ ಇಬ್ಬರೂ ಯುವ ಆಟಗಾರರು. ಲಂಕಾ ಬೌಲರ್ ಗಳ ಬೆವರು ಇಳಿಸಿದ್ದರು. ಮೈದಾನದ ಪ್ರತಿಯೊಂದು ಮೂಲೆ ಮೂಲೆಗೂ ಚೆಂಡು ಅಟ್ಟಿ, ರನ್ ಸುರಿಮಳೆಗೈದಿದ್ದರು. ಇಬ್ಬರೂ ತಂಡದ 46ನೇ ಓವರ್ ವರೆಗೂ ಜೊತೆಯಾಗಿಯೇ ಆಡಿ ಟೀಂ ಇಂಡಿಯಾದಲ್ಲಿ ಅತ್ಮವಿಶ್ವಾಸ ಮೂಡಿಸಿದ್ದರು.
ಅಂದಿನ ಈ ಇಬ್ಬರು ಆಟಗಾರರು ಈಗಿನ ಟಿ20 ರೀತಿಯಲ್ಲಿಯೇ ಆಟವಾಡಿದ್ದರು. ಅಂದು ಇವರು ಬರೋಬ್ಬರಿ 318 ರನ್ ಗಳನ್ನು ಕಲೆ ಹಾಕಿದ್ದರು. ಭಾರತೀಯ ಕ್ರಿಕೆಟ್ ತಂಡದ ದಾದಾ ಎಂದೆ ಖ್ಯಾತಿಯಾಗಿರುವ ಸೌರವ್ ಅಂದು ತಮ್ಮ ಕ್ರಿಕೆಟ್ ಬದುಕಿನ ಶ್ರೇಷ್ಠ 183 ರನ್ ಗಳನ್ನು ಕಲೆ ಹಾಕಿದ್ದರು. ಇದರಲ್ಲಿ ಸೌರವ್ ಬರೋಬ್ಬರಿ 17 ಬೌಂಡರಿ ಹಾಗೂ 7 ಸಿಕ್ಸರ್ ಸಿಡಿಸಿದ್ದರು.
ಇನ್ನೊಂದು ಬದಿಯಲ್ಲಿ ಗೋಡೆಯಂತೆ ನಿಂತಿದ್ದ ರಾಹುಲ್ ದ್ರಾವಿಡ್ 145 ರನ್ ಕಲೆ ಹಾಕಿದ್ದರು. ಅವರು ಕೂಡ ಬರೋಬ್ಬರಿ 17 ಬೌಂಡರಿ ಸಿಡಿಸಿದ್ದರು. ಇದರೊಂದಿಗೆ ಒಂದು ಸಿಕ್ಸ್ ರನ್ನು ಕೂಡ ಅಟ್ಟಿದ್ದರು.ಅಂದು ಎರಡನೇ ವಿಕೆಟ್ ಗೆ ಇದೇ ದಾಖಲೆಯಾಗಿ ಉಳಿಯಿತು. ಆದರೆ, ಈ ದಾಖಲೆಯನ್ನು ಕೆಲವೇ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡವೇ ಮುರಿಯಿತು.
ಆ ದಾಖಲೆಯಲ್ಲಿಯೂ ಹೆಮ್ಮೆಯ ಕನ್ನಡಿಗ ಹಾಗೂ ಭಾರತದ ಗೋಡೆ ರಾಹುಲ್ ದ್ರಾವಿಡ್ ಕೂಡ ಇದ್ದರು. ಇನ್ನೊಂದೆಡೆ ಸಚಿನ್ ತೆಂಡೂಲ್ಕರ್ ಇದ್ದರು. ಆಗ ಸಚಿನ್ ಅಜೇಯ 186 ರನ್ ಸಿಡಿಸಿದ್ದರೆ, ರಾಹುಲ್ 153 ರನ್ ಗಳಿಸಿದರು. ಈ ದಾಖಲೆ ಬರೋಬ್ಬರಿ 14 ವರ್ಷಗಳ ಕಾಲ ಅಳೆಯದೆ ಉಳಿದಿತ್ತು.