ವಿಜಯಸಾಕ್ಷಿ ಸುದ್ದಿ, ಗದಗ
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಗದಗ ಜಿಲ್ಲಾ ಘಟಕದ ಸಾಮಾಜಿಕ ಕಾರ್ಯಗಳನ್ನು ಗುರುತಿಸಿ ಜಿಲ್ಲಾಡಳಿತ ವತಿಯಿಂದ ಭಾನುವಾರ 75ನೇ ಸ್ವಾತಂತ್ರ‍್ಯೋತ್ಸವದ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಭಾರತೀಯ ರೆಡ್ ಕ್ರಾಸ್ ಜಿಲ್ಲಾ ಘಟಕದ ಕಾರ್ಯದರ್ಶಿ ಡಾ. ಎಮ್.ಡಿ. ಸಾಮುದ್ರಿ, ಜಿಲ್ಲಾಡಳಿತ ಮಂಡಳಿ ಹಾಗೂ ರಾಜ್ಯ ನಿರ್ದೇಶಕ ಮಂಡಳಿ ಸದಸ್ಯರಾದ ಡಾ. ಆರ್ ಎನ್ ಗೋಡಬೋಲೆ ಅವರಿಗೆ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಅವರ ಸಮ್ಮುಖದಲ್ಲಿ ನೆನಪಿನ ಕಾಣಿಕೆ, ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ ಇತರರು ಇದ್ದರು.
ರೆಡ್ ಕ್ರಾಸ್ ಸಂಸ್ಥೆ ಕೋವಿಡ್ ಒಂದನೇ ಅಲೆ ಹಾಗೂ ಎರಡನೇ ಅಲೆಯಲ್ಲಿ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ಹಾಗೂ ಹಲವಾರು ದಾನಿಗಳ ಸಹಕಾರದಿಂದ ಜಿಲ್ಲಾದ್ಯಂತ ಸಾಮಾಜಿಕ ಕಾರ್ಯಗಳನ್ನ ಮಾಡುತ್ತಾ ಬಂದಿದೆ.
ಲಾಕ್‌ಡೌನ್ ಅವಧಿಯಲ್ಲಿ ಸ್ಯಾನಿಟೈಸರ್, ಮಾಸ್ಕ್ ವಿತರಣೆ, ಬಡವರು ಹಾಗೂ ಬಡ ಕೂಲಿ ಕಾರ್ಮಿಕರಿಗೆ ಆಹಾರ ಪೊಟ್ಟಣಗಳ ವಿತರಣೆ, ದಿನಸಿ ಕಿಟ್, ಆಸ್ಪತ್ರೆಗಳಿಗೆ ಆಕ್ಸಿಜನ್ ಕಾನ್ಸ್ಂಟ್ರೇಟರ್ ವಿತರಣೆ ಸೇರಿದಂತೆ ಜನರಲ್ಲಿ ಕೋವಿಡ್ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ.