ವಿಜಯಸಾಕ್ಷಿ ಸುದ್ದಿ, ಗದಗ
ಭಾರತ್ ಗ್ಯಾಸ್ ಅಂಗಡಿಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಕರಕಲವಾಗಿರುವ ಘಟನೆ ಗದಗ ನಗರದಲ್ಲಿ ನಡೆದಿದೆ. ನಗರ ಬ್ಯಾಂಕ್ ರಸ್ತೆಯಲ್ಲಿನ ಜನತಾ ಬಜಾರ್ ಎದುರಿಗೆ ಇರುವ ಭಾರತ್ ಗ್ಯಾಸ್ ಎಜೆನ್ಸಿ ಅಂಗಡಿಗೆ ಬೆಂಕಿ ಬಿದ್ದಿದೆ.

ನಿನ್ನೆಯಿಂದ ಎರಡು ದಿನಗಳ ಕಾಲ ಬಂದ್ ಇದ್ದ ಅಂಗಡಿಯಲ್ಲಿ ಇಂದು ಸಂಜೆ ವೇಳೆ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಇದ್ದಕ್ಕಿದ್ದಂತೆ ಅಂಗಡಿ ಹೊತ್ತಿ ಉರಿದಿದೆ. ಪರಿಣಾಮ ಅಂಗಡಿಯೊಳಗಿನ ಕಂಪ್ಯೂಟರ್ ಗಳು, ದಾಖಲೆ ಪತ್ರಗಳು ಸುಟ್ಟು ಕರಕಲಾಗಿವೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳೀಯರ ಸಹಕಾರದೊಂದಿಗೆ ಬೆಂಕಿ ನಂದಿಸಿದ್ದಾರೆ.

ಆದ್ರೆ ಜನಸಂದನಿಯೊಳಗಿರುವ ಅಂಗಡಿಯಲ್ಲಿ ಹಲವು ತುಂಬಿದ ಗ್ಯಾಸ್ ಸಿಲಿಂಡರ್ ಗಳಿದ್ದವು, ಅದರಲ್ಲಿ ಕೇವಲ ಒಂದೇ ಸಿಲಿಂಡರ್ ಗೆ ಬೆಂಕಿ ತಗುಲಿ ಸ್ಪೋಟಗೊಂಡಿದೆ. ಪರಿಣಾಮ ಅಂಗಡಿಯೊಳಗಿನ ಗಾಜುಗಳು ಪುಡಿಪುಡಿಯಾಗಿವೆ. ಅದೃಷ್ಟವಶಾತ್ ಹಲವಾರು ಸಿಲಿಂಡರ್ ಗಳಿದ್ದು ಅವುಗಳಿಗೆ ಬೆಂಕಿ ತಗುಲಿಲ್ಲ. ಅಕಸ್ಮಾತ್ ಉಳಿದ ಎಲ್ಲಾ ಸಿಲಿಂಡರ್ ಗಳಿಗೆ ಬೆಂಕಿ ತಗುಲಿ ಸ್ಪೋಟಗೊಂಡಿದ್ದರೆ ಭಾರಿ ಅನಾಹುತ ಸಂಭವಿಸುತ್ತಿತ್ತು.

ಇನ್ನು ಸಮೀಪದ ವಿದ್ಯುತ್ ಕಂಬದಲ್ಲಿ ಕಂಡ ಬೆಂಕಿ ಕಂಡು ಬಂದ ತಕ್ಷಣವೇ ಹೆಸ್ಕಾಂ ಸಿಬ್ಬಂದಿ ಸರಿಪಡಿಸುವ ವೇಳೆ ಆಗಲೇ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳೀಯರಾದ ಅನ್ವರ ಶಿರಹಟ್ಟಿ, ಉಮರಫಾರೂಕ್ ಹುಬ್ಬಳ್ಳಿ, ರಫೀಕ ಅಬ್ಬಿಗೇರಿ ಸೇರಿದಂತೆ ಸ್ಥಳೀಯರು ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಶ್ರಮಿಸಿದರು.
ಎಮ್ ಎಸ್ ಭೂಸ್ತ ಎಂಬುವರಿಗೆ ಈ ಅಂಗಡಿ ಸೇರಿದ್ದು, ನಗರ ಠಾಣೆಯ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.