ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ
ಬೆಲೆ ಏರಿಕೆ ಹಾಗೂ ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ಖಂಡಿಸಿ ಸೆಪ್ಟಂಬರ್ 27ರಂದು ಕರೆ ನೀಡಿರುವ ಭಾರತ ಬಂದ್ ಗೆ ಕರ್ನಾಟಕ ರಕ್ಷಣಾ ವೇದಿಕೆ ರೈತ ಘಟಕ ಬೆಂಬಲ ನೀಡಲಿದೆ ಎಂದು ಜಿಲ್ಲಾಧ್ಯಕ್ಷ ಪಾಪು ಧಾರೆ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸೆಪ್ಟೆಂಬರ್ 27 ರಂದು ಸಂಯುಕ್ತ ಕಿಸಾನ ಮೋರ್ಚಾದಿಂದ ನೀಡಿರುವ ಭಾರತ ಬಂದ್ ಕರೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ನೈತಿಕ ಬೆಂಬಲ ಕೊಡಲಾಗುವುದು.
ಜನರು ಕೋವಿಡ್ ಸಾಂಕ್ರಾಮಿಕದ ನಂತರ ಈಗ ತಾನೆ ಸುಧಾರಿಸಿಕೊಳ್ಳುತ್ತಿದ್ದಾರೆ. ರಾಜ್ಯದ ಆರ್ಥಿಕತೆ ಸಹ ಸಹಜ ಸ್ಥಿತಿಗೆ ಬರುತ್ತಿದೆ. ಮತ್ತೆ ಶಾಲಾ ಕಾಲೇಜು ಹಾಗೂ ಸಣ್ಣ ಪುಟ್ಟ ವ್ಯಾಪಾರಸ್ಥರ ವ್ಯಾಪಾರ ಸುಮಾರು 2ವರ್ಷದ ನಂತರ ಪ್ರಾರಂಭವಾಗಿವೆ. ಇವುಗಳಿಗೆ ವ್ಯತಯ ಆಗಬಾರದು ಎಂಬ ಕಾರಣದಿಂದಾಗಿ ಕರ್ನಾಟಕ ರಕ್ಷಣಾ ವೇದಿಕೆ ರಸ್ತೆಗಿಳಿದು ಬಂದ್ ಗೆ ಬೆಂಬಲ ನೀಡದೆ, ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿಗೆ ಈ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಮನವಿ ನೀಡುವ ಮೂಲಕ ಬೆಂಬಲ ನೀಡುತ್ತದೆ ಎಂದು ಪಾಪು ಧಾರೆ ಹೇಳಿದ್ದಾರೆ.