ವಿಜಯಸಾಕ್ಷಿ ಸುದ್ದಿ, ದಾವಣಗೆರೆ
ಕೊರೊನಾ ಮಹಾಮಾರಿ ಜನರನ್ನು ಸಾಕಷ್ಟು ಕಾಡಿದೆ. ಇದರ ಮಧ್ಯೆ ಹೊಸ ಹೊಸ ವೈರಸ್ ಗಳು ಪತ್ತೆಯಾಗುತ್ತಿವೆ. ಅಲ್ಲದೇ, 3ನೇ ಅಲೆ ಮಕ್ಕಳಲ್ಲಿ ಹೆಚ್ಚು ವ್ಯಾಪಿಸುತ್ತದೆ ಎಂಬ ಆತಂಕವನ್ನು ತಜ್ಞರು ಹೇಳಿದ್ದಾರೆ. ಇದರ ಮಧ್ಯೆಯೇ ಕೊರೊನಾ ವೈರಸ್ ರೂಪಾಂತರದಿಂದ ಎ-ನೆಕ್ ಎಂಬ ಹೊಸ ರೋಗ ಮಕ್ಕಳಲ್ಲಿ ಕಾಣಿಸಿದೆ.
ದೇಶದಲ್ಲಿಯೇ ಮೊದಲ ಬಾರಿಗೆ ಮಕ್ಕಳಲ್ಲಿ ಕಂಡು ಬಂದಿದೆ. ಅದು ದಾವಣಗೆರೆಯಲ್ಲಿ ಕಂಡು ಬಂದಿದೆ. ಈ ರೋಗದಿಂದ ಸಾವೇ ಹೆಚ್ಚು ಎಂಬ ಆತಂಕ ಕೇಳಿ ಬರುತ್ತಿದ್ದು, ಜನರು ಭಯಭೀತರಾಗುವಂತಾಗಿದೆ.
ಜಿಲ್ಲೆಯಲ್ಲಿ ಶಂಕಿತ ಮಿಸ್ಸಿ ಎನ್ನುವ ರೋಗ ಲಕ್ಷಣಗಳು ಮಕ್ಕಳಲ್ಲಿ ಕಂಡು ಬಂದಿತ್ತು, ಅದಾದ ಬಳಿಕ ಇದೀಗ ದೇಶದಲ್ಲಿಯೇ ಮೊದಲ ಬಾರಿಗೆ ಎ-ನೆಕ್ ಎಂಬ ರೋಗ ಲಕ್ಷಣ ಮಗುವೊಂದರಲ್ಲಿ ಕಂಡು ಬಂದಿದೆ. ಅದನ್ನು ಕಂಡು ಹಿಡಿಯುವಲ್ಲಿ ಎಸ್ ಎಸ್ ಹೈಟೆಕ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ.
ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ 13 ವರ್ಷದ ಮಗುವಿಗೆ ಈ ಎ-ನೆಕ್ ರೋಗ ಲಕ್ಷಣ ಕಂಡು ಬಂದಿದೆ. ದಾವಣಗೆರೆ ನಗರದ ಎಸ್ ಎಸ್ ವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕನಲ್ಲಿ ಈ ಪ್ರಕರಣ ಪತ್ತೆಯಾಗಿದೆ.
ಕೊರೊನಾ ಸೋಂಕು ತಗುಲಿ ಗುಣ ಹೊಂದಿದ ಮಕ್ಕಳಲ್ಲಿ ಈ ವೈರಸ್ ಕಂಡು ಬರಲಿದೆ. ಇದು ಗಂಭೀರ ರೋಗದ ಲಕ್ಷಣ ಎಂದು ಹೇಳಲಾಗುತ್ತಿದೆ. ಆದರೆ ಪ್ರಸ್ತುತವಾಗಿ ಹೈಟೆಕ್ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.