ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಸದ್ಯ ದೇಶದಲ್ಲಿ ಕೊರೊನಾ ಎರಡನೇ ಅಲೆ ತಾಂಡವಾಡುತ್ತಿದೆ. ಇನ್ನೂ ಮೂರನೇ ಅಲೆಯ ಆತಂಕ ಇದ್ದು, ಅದು ಮಕ್ಕಳ ಮೇಲೆಯೇ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಹೀಗಾಗಿ ಮಕ್ಕಳಿಗೆ ಲಸಿಕೆ ನೀಡಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ಜಗತ್ತಿನ ಯಾವುದೇ ರಾಷ್ಟ್ರಗಳು ಮಕ್ಕಳಿಗೆ ಲಸಿಕೆ ನೀಡುತ್ತಿಲ್ಲ. ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಕೂಡ ಯಾವುದೇ ಶಿಫಾರಸು ಮಾಡಿಲ್ಲ. ಮಕ್ಕಳಲ್ಲಿ ಲಸಿಕೆಗಳ ಸುರಕ್ಷತೆಯ ಬಗ್ಗೆ ಅಧ್ಯಯನಗಳು ನಡೆದಿವೆ ಎಂದು ತಿಳಿಸಿದೆ.
ದೇಶದಲ್ಲಿ ಮಕ್ಕಳ ಮೇಲೆ ಶೀಘ್ರವೇ ಕ್ಲಿನಿಕಲ್ ಟ್ರಯಲ್ ಆರಂಭವಾಗಲಿದೆ. ಈ ಪ್ರಯೋಗಗಳ ಆಧಾರದ ಮೇಲೆ ವಿಜ್ಞಾನಿಗಳು ಮುಂದಿನ ನಿರ್ಧಾರ ಕೈಗೊಳ್ಳಬೇಕೆ ಹೊರತು, ಭಯ ಹಾಗೂ ರಾಜಕಾರಣಿಗಳ ರಾಜಕೀಯ ಆಧರಿಸಿ ನಿರ್ಧಾರ ಕೈಗೊಳ್ಳಲಾಗುವುದಿಲ್ಲ ಎಂದು ತಿಳಿಸಿದೆ.
ಇತ್ತೀಚೆಗಷ್ಟೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನೀತಿ ಆಯೋಗದ ಸದಸ್ಯ (ಆರೋಗ್ಯ ವಿಭಾಗ) ಡಾ.ವಿ.ಕೆ.ಪೌಲ್, ಮಕ್ಕಳ ಮೇಲೆ ಕೊವಾಕ್ಸಿನ್ ಲಸಿಕೆಯ ವೈದ್ಯಕೀಯ ಪ್ರಯೋಗ ಇನ್ನೂ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಕೊವಾಕ್ಸಿನ್ ಲಸಿಕೆಯನ್ನು 2 ರಿಂದ 18 ವರ್ಷದವರ ಮೇಲೆ ಎರಡು ಮತ್ತು ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಸಲು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ) ಅನುಮತಿ ನೀಡಿದೆ ಎಂದು ಹೇಳಿದ್ದಾರೆ.