ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ
ಮಗಳನ್ನು ತನ್ನ ಜೊತೆಗೆ ಕಳುಹಿಸಲು ನಿರಾಕರಿಸಿದ ಕಾರಣಕ್ಕಾಗಿ ಸಿಟ್ಟಿಗೆದ್ದ ಅಳಿಯನೊಬ್ಬ ಮಾವನ ಕತ್ತು ಸೀಳಿದ ಘಟನೆ ಸಮೀಪದ ಹಳ್ಳಿಕೇರಿ ಗ್ರಾಮದಲ್ಲಿ ನಡೆದಿದೆ.
ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮದ ಶಿವಪ್ಪ ದಳವಾಯಿ ಎಂಬಾತನೇ ತೀವ್ರ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗೆ ಕಿಮ್ಸ್ ಆಸ್ಪತ್ರೆಗೆ ದಾಖಲಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಕಳೆದ ಕೆಲವು ವರ್ಷಗಳ ಹಿಂದೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಗ್ರಾಮದ ಜಗದೀಶ್ ಕಂಬಳಿ ಎನ್ನುವವನ ಜೊತೆ ಶಿವಪ್ಪ ದಳವಾಯಿ ಅವರ ಮಗಳ ಜೊತೆಗೆ ಲಗ್ನವಾಗಿತ್ತು.
ಆದರೆ ಕೆಲವು ದಿನಗಳಿಂದ ಕೌಟುಂಬಿಕ ಸಮಸ್ಯೆಯ ಹಿನ್ನೆಲೆಯಲ್ಲಿ ತವರು ಮನೆ ಹಳ್ಳಿಕೇರಿಯಲ್ಲಿಯೇ ಉಳಿದುಕೊಂಡಿದ್ದ ಪತ್ನಿಯನ್ನು ಅಳಿಯ ಜಗದೀಶ್ ಕಂಬಳಿ ಕರೆಯಲು ಗ್ರಾಮಕ್ಕೆ ಬಂದಿದ್ದ. ಆದರೆ ಮಗಳನ್ನು ಕಳುಹಿಸಲು ಶಿವಪ್ಪ ನಿರಾಕರಿಸಿದ.
ಇದು ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಹೋಗಿದೆ. ಆಗ ಸಿಟ್ಟಿಗೆದ್ದ ಜಗದೀಶ್ ಕಂಬಳಿ ಬ್ಲೇಡ್ ನಿಂದ ದಾಳಿ ನಡೆಸಿದ್ದಾನೆ. ತಂದೆಯ ಜೀವ ಉಳಿಸಲು ಬಂದ ಮಗ ಪ್ರವಿಣ ದಳವಾಯಿ ಯ ಕುತ್ತಿಗೆಗೂ ಬ್ಲೇಡ್ ನಿಂದ ದಾಳಿ ನಡೆಸಿದ್ದಾನೆ.
ಈ ಘಟನೆಯಿಂದ ಹಳ್ಳಿಕೇರಿ ಗ್ರಾಮದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಟನೆಯ ಮಾಹಿತಿ ತಿಳಿದ ಅಣ್ಣಿಗೇರಿ ಠಾಣೆಯ ಪಿಎಸ್ಐ ಎಲ್ ಕೆ ಜೂಲಕಟ್ಟಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿ ಜಗದೀಶ್ ಕಂಬಳಿ ಪರಾರಿಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.