ವಿಜಯಸಾಕ್ಷಿ ಸುದ್ದಿ, ಗದಗ
ತಾಳಿ ಕಟ್ಟಿದ ಗಂಡ ಒಂದು ಮಗುವಾದ ಮೇಲೆ ನಾಪತ್ತೆಯಾಗಿದ್ದ. ಮಗುವಿನ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಬದುಕು ಸಾಗಿಸುತ್ತಿದ್ದ ಈ ಮಹಿಳೆಯ ಬದುಕಿನಲ್ಲಿ ಕಿಲಾಡಿ ಯುವಕನೊಬ್ಬ ಆಶಾಕಿರಣದಂತೆ ಎಂಟ್ರಿ ಕೊಟ್ಟಿದ್ದ. ನೀನೇ ಚಿನ್ನ, ರನ್ನ ಅಂತ ಬಲೆಗೆ ಹಾಕಿಕೊಂಡು, ಆಕೆ ಗರ್ಭಿಣಿ ಆಗುತ್ತಿದ್ದಂತೆ ಎಸ್ಕೇಪ್ ಆಗಿದ್ದಾನೆ!
ರೋಣ ನಿವಾಸಿಯಾಗಿರುವ ಈ ಮಹಿಳೆ ನಂಬಿಕೆ ದ್ರೋಹಕ್ಕೆ ಒಳಗಾಗಿದ್ದು, ಈಗ ನ್ಯಾಯಕ್ಕಾಗಿ ಮೊರೆಯಿಟ್ಟಿದ್ದಾಳೆ. ರೋಣ ತಾಲೂಕಿನ ಮೇಲ್ಮಠ ಗ್ರಾಮದ ನಿವಾಸಿ ಮಹಾಂತೇಶ ರಟ್ಟಿಹಳ್ಳಿ ಎಂಬಾತ ಮೋಸ ಮಾಡಿದ್ದಾನೆ ಎಂದು ಈಕೆ ಆರೋಪಿಸುತ್ತಿದ್ದಾಳೆ.
ಗದಗ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಈ ಯುವತಿ, ಆತ ನನ್ನನ್ನು ಪತ್ನಿಯೆಂದು ಸ್ವೀಕಾರ ಮಾಡಲಿ ಎಂದು ಒತ್ತಾಯ ಮಾಡಿದ್ದಾಳೆ. ಮೊದಲನೇ ಗಂಡ ಒಂದು ಮಗುವನ್ನು ಕೈಗೆ ಕೊಟ್ಟು, ಬಿಟ್ಟು ಹೋಗಿದ್ದಾನೆ. ಮಗುವಿನ ಭವಿಷ್ಯದ ದೃಷ್ಟಿಯಿಂದ ಬೆಂಗಳೂರಿನ ಗಾರ್ಮೆಂಟ್ ಒಂದರಲ್ಲಿ ಕೆಲಸಕ್ಕೆ ಸೇರಿದ್ದ ಈಕೆಗೆ ಅಲ್ಲಿ ಮಹಾಂತೇಶ ರಟ್ಟಿಹಳ್ಳಿ ಪರಿಚಯವಾಗಿದ್ದಾನೆ. ಈಕೆಯ ಪರಿಸ್ಥಿತಿ ಅರಿತ ಆತ, ಮಗುವಿಗೆ ತಂದೆಯಾಗುತ್ತೇನೆ ಎಂದು ಹೇಳಿ, ಆಕೆಯನ್ನು ಪ್ರೀತಿಸಿದ. ಮದುವೆಯ ಆಮಂತ್ರಣ ಪತ್ರವನ್ನೂ ಸಿದ್ಧಪಡಿಸಿದ್ದ. ಇನ್ನೇನು ಮದುವೆಯಾಗುತ್ತದೆ, ನನ್ನ ಬದುಕೊಂದು ನೆಲೆ ಕಂಡುಕೊಳ್ಳುತ್ತದೆ ಎನ್ನುವಷ್ಟರಲ್ಲಿ ಆತ ಕೈಕೊಟ್ಟಿದ್ದಾನೆ. ನನಗೆ ನ್ಯಾಯ ಕೊಡಿಸಿ ಎಂದು ರೋಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಪ್ರೀತಿಸುತ್ತಿದ್ದ ಮಹಾಂತೇಶ ತನ್ನನ್ನು ಮದುವೆಯಾಗುತ್ತಾನೆ ಎಂದು ನಂಬಿ ತನ್ನ ಬಳಿಯಿದ್ದ 3 ಲಕ್ಷ ರೂ.ಗಳನ್ನೂ ಆತನ ಕೈಗಿತ್ತಿದ್ದಳು. ಮಹಾಂತೇಶ ಮನೆಯಲ್ಲಿ ಒಪ್ಪಿಸಿ ಮದುವೆ ಕಾರ್ಡ್ ಪ್ರಿಂಟ್ ಹಾಕಿಸಿದ್ದ. ಆದರೆ. ಮದುವೆಯ ಮುಂಚೆ ಈ ಮಹಿಳೆ ಗರ್ಭಿಣಿಯಾಗಿದ್ದಾಳೆ ಎಂದು ಮಹಾಂತೇಶನ ಮನೆಯವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರಂತೆ. ಮೇ 31ರಂದು ಫಿಕ್ಸ್ ಮಾಡಿದ್ರು. ಅಷ್ಟರೊಳಗೇ ಮಹಾಂತೇಶ ಎಸ್ಕೇಪ್ ಆಗಿದ್ದಾನೆ.
ಬೆಂಗಳೂರು ಹಾಗೂ ರೋಣದಲ್ಲಿ ಪೊಲೀಸರ ಮೊರೆ ಹೋಗಿದ್ದು, ರೋಣ ಪೊಲೀಸರು ಮಹಾಂತೇಶನನ್ನು ಪತ್ತೆ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾಳೆ.
ಈಗ ಸಂಘಟನೆಗಳು ಈ ಮಹಿಳೆಯ ಬೆನ್ನಿಗೆ ನಿಂತಿದ್ದು, ಯುವಕನನ್ನು ಪತ್ತೆ ಹಚ್ಚಿ, ಮದುವೆ ಮಾಡಿಸಲು ಮುಂದಾಗಿವೆ.
ನಾನು ಬೆಂಗಳೂರಿನ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡ್ತಿರೋವಾಗ ಮಹಾಂತೇಶ್ ಪರಿಚಯ ಆದ. ಆತನೇ ಬಲವಂತವಾಗಿ ಕೆಟ್ಟದಾಗಿ ನಡೆದುಕೊಂಡ. ಬಳಿಕ ಮದುವೆಯಾಗೋದಾಗಿ ಮಾತು ಕೊಟ್ಟಿದ್ದ. ನಾನೀಗ 6 ತಿಂಗಳು ಗರ್ಭಿಣಿ. ಆದ್ರೆ ಈಗ ನನ್ನ ಮದುವೆ ಆಗೋದಿಲ್ಲ ಅಂತಿದ್ದಾನೆ. ಅವನ ಮನೆಯವರು ಅವನನ್ನ ಬಚ್ಚಿಟ್ಟಿದ್ದಾರೆ. ಆತ ನನಗೆ ಬೇಕು.
ನೊಂದ ಮಹಿಳೆ
ಮಹಾಂತೇಶ್ ತಲೆ ಮರೆಸಿಕೊಂಡಿದ್ದಾನೆ. ಆತನಿಗೆ ರಾಜಕಾರಣಿಗಳ ಕುಮ್ಮಕ್ಕು ಇದೆ. ಮೂರು ಠಾಣೆಗಳಲ್ಲಿ ಪೊಲೀಸರಿಗೆ ದೂರು ನೀಡಿದ್ದೇವೆ. ಏನೇ ಆಗಲಿ ಆ ಮಹಿಳೆಗೆ ನ್ಯಾಯ ಸಿಗೋವರೆಗೂ ನಾವು ಹಿಂದೆ ಸರಿಯೋದಿಲ್ಲ. ಮಹಾಂತೇಶ್ ಈಕೆಯನ್ನು ಮದುವೆಯಾಗೋವರೆಗೂ ಬಿಡೋದಿಲ್ಲ.
ರೇಖಾ ಮೋರೆ, ಕರವೇ ಕಾರ್ಯಕರ್ತೆ