ಮಗುವಿನ ಗಂಟಲಲ್ಲಿ ಸಿಲುಕಿದ ಮೆಂತಾಲ್ ಬಾಕ್ಸ್!!

0
Spread the love

ಯಶಸ್ವಿಯಾಗಿ ಹೊರತೆಗೆದ ವೈದ್ಯರು

Advertisement

ಜಿಲ್ಲಾಸ್ಪತ್ರೆ ವೈದ್ಯರಿಗೆ ಕೃತಜ್ಞತೆ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ಕೊಪ್ಪಳ: ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹುಣಸಿಹಾಳ ಗ್ರಾಮದ ರೈತ ನಿಂಗಪ್ಪ ಗಾಣದಾಳ ಅವರ ಎಂಟು ತಿಂಗಳ ಕೂಸು ಮಹಾಂತೇಶ ಮನೆಯಲ್ಲಿ ಆಟವಾಡುವಾಗ ನೆಲದಲ್ಲಿ ಬಿದ್ದಿದ್ದ ಮೆಂತಾಲ್ ಬಾಕ್ಸ್ ಬಾಯಲ್ಲಿ ಇಟ್ಟುಕೊಂಡು ನುಂಗಲು ಯತ್ನಿಸಿದೆ‌. ಮೆಂತಾಲ್ ಡಬ್ಬಿ ಪುಣ್ಯಕ್ಕೆ ಹೊಟ್ಟೆ ಸೇರದೆ ಗಂಟಲಲ್ಲಿ ಸಿಲುಕಿದೆ.

ಮಗು ಡಬ್ಬಿ‌ ಬಾಯಲ್ಲಿಟ್ಟುಕೊಳ್ಳುವುದನ್ನು ನೋಡಿದ ಮಗುವಿನ ಅಣ್ಣ, ತನ್ನ ತಾಯಿಗೆ ವಿಷಯ ತಿಳಿಸಿದ್ದಾನೆ. ಮನೆಗೆಲಸ ಬಿಟ್ಟು ಬಂದ ತಾಯಿ ಗಂಟಲಿನಿಂದ ಡಬ್ಬಿ ಹೊರತೆಗೆಯಲು ಪ್ರಯತ್ನಿಸಿದ್ದಾರೆ. ಆದರೆ ಆಗಲಿಲ್ಲ. ಕೊನೆಗೆ ಮಗುವಿನ ರೋಧನ ಕಂಡು ಕೊಪ್ಪಳ ಜಿಲ್ಲಾಸ್ಪತ್ರೆಗೆ ಕರೆ ತಂದಿದ್ದಾರೆ. ಜಿಲ್ಲಾಸ್ಪತ್ರೆಯ ಗಂಟಲು ತಜ್ಞ ಡಾ.ಮಲ್ಲಿಕಾರ್ಜುನ ಸ್ಕ್ಯಾನ್ ಮಾಡಿ ಗಂಟಲಲ್ಲಿ ಪುಟ್ಟ ಡಬ್ಬಿ‌ ಇರುವುದನ್ನು ಖಚಿತ ಪಡಿಸಿಕೊಂಡು ಲಘು ಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಮೆಂತಾಲ್ ಡಬ್ಬಿಯನ್ನು ಮಗುವಿನ ಗಂಟಲಿನಿಂದ ಹೊರ ತೆಗೆದಿದ್ದಾರೆ. ಅಂದ ಹಾಗೆ ಈ ಘಟನೆ ನಡೆದಿದ್ದು ಜುಲೈ 1ರಂದು.

“ಸ್ವಲ್ಪ ತಡವಾಗಿದ್ದರೆ ಮಗುವಿನ ಪ್ರಾಣಕ್ಕೆ ಅಪಾಯ ಇತ್ತು. ಮಗುವಿಗೆ ಜೊಲ್ಲು ನುಂಗಲು ಆಗದ ಸ್ಥಿತಿ ಎದುರಿಸುತ್ತಿತ್ತು. ಧ್ವನಿಯೂ ಬರುತ್ತಿರಲಿಲ್ಲ. ಒಟ್ಟಾರೆ ತನ್ನ ನೋವನ್ನ ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿ‌ ಮಗು ಇತ್ತು. ಆಸ್ಪತ್ರೆಗೆ ಬಂದು ವಿಷಯ ತಿಳಿಸಿದ ಹದಿನೈದು ನಿಮಿಷದಲ್ಲಿ ಮಗುವಿನ ಗಂಟಲಲ್ಲಿದ್ದ ಪ್ಲಾಸ್ಟಿಕ್ ಡಬ್ಬಿಯನ್ನು ಹೊರತೆಗೆದಿದ್ದೇವೆ. ಪೋಷಕರು ಗಾಬರಿಯಲ್ಲಿ ಗದಗ, ಹುಬ್ಬಳ್ಳಿಗೆ ಹೋಗಲು ಯತ್ನಿಸಿದ್ದರೆ ಸಮಯ ಮೀರಿ ಹೋಗುತ್ತಿತ್ತು. ಜೊತೆಗೂ ಕೊಪ್ಪಳ ಜಿಲ್ಲಾಸ್ಪತ್ರೆ, ಮೆಡಿಕಲ್ ಕಾಲೇಜಿನಲ್ಲೂ ಉತ್ತಮ ಚಿಕಿತ್ಸೆ ಸಿಗುತ್ತದೆ ಎಂಬುದಕ್ಕೆ ಈ ಪ್ರಕರಣ ನಿದರ್ಶನವಾಯಿತು.”
-ಡಾ.ಮಲ್ಲಿಕಾರ್ಜುನ, ಕಿವಿ, ಮೂಗು ಹಾಗೂ ಗಂಟಲು ತಜ್ಞ, ಜಿಲ್ಲಾಸ್ಪತ್ರೆ, ಕೊಪ್ಪಳ.

ಹೊಲದಾಗ ಕೆಲಸ ಮಾಡಾಕತ್ತಿದ್ದೆ. ನಮ್ಮ ಹುಡುಗ ಬಂದು ವಿಷಯ ತಿಳಿದ ಕೂಡಲೇ ಗಾಬರಿಯಾಗಿ ಓಡಿ ಬಂದೆ. ತಡ ಮಾಡದನ ಜಿಲ್ಲಾಸ್ಪತ್ರೆಗೆ ಕರಕೊಂಡು ಬಂದೆ. ಇಲ್ಲಿನ ಡಾಕ್ಟರು ನಮ್ಮ ಮಗುವಿನ ಜೀವ ಉಳಿಸಿದ್ರು. ಅವರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದ್ರು‌ ಕಡಮಿನ.
-ನಿಂಗಪ್ಪ ಗಾಣದಾಳ, ರೈತ, ಹುಣಸಿಹಾಳ.


Spread the love

LEAVE A REPLY

Please enter your comment!
Please enter your name here