ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಕೋವಿಡ್ ಹೋರಾಟಕ್ಕೆ ದೇಶದ ಮೂಲೆ ಮೂಲೆಯಲ್ಲಿ ದೇಣಿಗೆ ಸಂಗ್ರಹವಾಗುತ್ತಿದೆ. ಸದ್ಯ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ಅವರು ಈ ಹೋರಾಟಕ್ಕೆ ರೂ. 100 ಕೋಟಿ ದೇಣಿಗೆ ನೀಡಿದ್ದಾರೆ.
ಜನಕ್ಕೆ ಕಷ್ಟ ಎಂದರೆ ಸಾಕು ಮಿಡಿಯುವ ಸುಧಾಮೂರ್ತಿ ಅವರು ಈ ಬಾರಿಯೂ ಕೋವಿಡ್ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ್ದಾರೆ. ಕೋವಿಡ್ ಹೋರಾಟಕ್ಕೆ ಅವರು ರೂ. 100 ಕೋಟಿ ದೇಣಿಗೆ ನೀಡಿದ್ದಾರೆ. ಇಲ್ಲಿಯವರೆಗೂ ಅವರು ಕೋವಿಡ್ ವಿರುದ್ಧದ ಹೋರಾಟಕ್ಕೆ ಬರೋಬ್ಬರಿ ರೂ. 200 ಕೋಟಿ ದೇಣಿಗೆ ನೀಡಿದಂತಾಗಿದೆ.
ಇತ್ತೀಚಿಗೆ ಖಾಸಗಿ ಸುದ್ದಿ ಸಂಸ್ಥೆಯಲ್ಲಿ ಸಂದರ್ಶನ ನೀಡಿದ ಸುಧಾಮೂರ್ತಿ, ಕಳೆದ ವರ್ಷ ಬೆಂಗಳೂರಿನಲ್ಲಿ ಕೋವಿಡ್ ಆಸ್ಪತ್ರೆ ಸ್ಥಾಪನೆಗೆ ನೆರವು ನೀಡಿದ್ದೇವೆ. ಸದ್ಯ ಆಸ್ಪತ್ರೆಯು ಪರಿಪೂರ್ಣವಾಗಿ ನಡೆಯುತ್ತಿದೆ. ಕಳೆದ ವರ್ಷ ರೂ. 100 ಕೋಟಿ ನೀಡಲಾಗಿತ್ತು. ಆದರೆ, ಈ ಬಾರಿ ರೂ. 100 ಕೋಟಿಯನ್ನು ಮೂಲಭೂತ ಸೌಕರ್ಯಗಳ ಪೂರೈಕೆಗೆ ಬಳಕೆ ಮಾಡಿಕೊಳ್ಳಲು ವಿತರಿಸಲಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರು ಮಾತ್ರವಲ್ಲದೆ ಮಂಗಳೂರು ಹೈದ್ರಾಬಾದ್, ಪುಣೆ ಹಾಗೂ ಡೆಲ್ಲಿಯಲ್ಲಿ ನಿಯಂತ್ರಣಕ್ಕೆ ವೆಂಟಿಲೇಟರ್ ಆಮ್ಲಜನಕ ಹಾಗೂ ಸ್ಯಾನಿಟೈಸರ್ ಗಳು ಸೇರಿದಂತೆ ಇನ್ನಿತರ ಉಪಯುಕ್ತ ಉಪಕರಣಗಳನ್ನು ಪೂರೈಸಲಾಗಿದೆ. ಕೋವಿಡ್ ಮಾತ್ರವಲ್ಲದೆ ಎಷ್ಟೋ ಜನ ಹಸಿವಿನಿಂದ ಕೂಡ ಬಳಲುತ್ತಿದ್ದು, ಆಟೋ ಚಾಲಕರು, ದಿನಗೂಲಿ ಕಟ್ಟಡ ಕಾರ್ಮಿಕರು ಸೇರಿದಂತೆ ಬಡ ಕಾರ್ಮಿಕರಿಗೆ ಆಹಾರ ಕಿಟ್ ಗಳನ್ನು ಪೂರೈಸಿ, ಕೋವಿಡ್ ಲಸಿಕೆ ತೆಗೆದುಕೊಳ್ಳಿ ಎಂದು ಜಾಗೃತಿ ಮೂಡಿಸಲಾಗಿದೆ ಎಂದು ಹೇಳಿದ್ದಾರೆ.