ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಕಳೆದ ವರ್ಷಕ್ಕಿಂತ ಈ ವರ್ಷ ಮಹಾಮಾರಿಯ ಅಟ್ಟಹಾಸ ಹೆಚ್ಚಾಗುತ್ತಿದೆ. ಅಲ್ಲದೇ, ಸಮರ್ಪಕ ಆಕ್ಸಿಜನ್ ಸಿಗದೆ ಜನರು ನರಳಾಡುತ್ತಿದ್ದಾರೆ. ಇತ್ತ ಲಾಕ್ ಡೌನ್ ನಿಂದಾಗಿ ಹಲವಾರು ಸೆಲೆಬ್ರೆಟಿಗಳು ಮನೆಯಿಂದಲೇ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ ಕಾಮಿಡಿ ಕಿಂಗ್ ಚಿಕ್ಕಣ್ಣ ಶೂಟಿಂಗ್ ಕೆಲಸವಿಲ್ಲದೆ, ಅವರ ಹಳೆಯ ಕೆಲಸಕ್ಕೆ ಮರಳಿದ್ದಾರೆ.
ಸಾಮಾನ್ಯ ಕುಟುಂಬದಿಂದ ಬಂದಿರುವ ಚಿಕ್ಕಣ್ಣ ಮೊದಲು ಜೀವನಕ್ಕಾಗಿ ಗಾರೆ ಕೆಲಸ ಮಾಡುತ್ತಿದ್ದರು. ಮೇಸ್ತ್ರಿ ಕೈಕೆಳಗೆ ದಿನಗೂಲಿಗೆ ಮನೆಗಳ ಗಾರೆ ಕೆಲಸಕ್ಕೆ ಹೋಗುತ್ತಿದ್ದ ಅವರು ನಟನಾಗುತ್ತಿದ್ದಂತೆ ಬೆಂಗಳೂರಿಗೆ ಬಂದು ಹಲವಾರು ವರ್ಷಗಳ ಶ್ರಮದಿಂದ ಉತ್ತಮ ನಟನಾಗಿ ಹೆಸರು ಮಾಡಿದ್ದಾರೆ.
ಆದರೆ, ಸದ್ಯ ಚಿಕ್ಕಣ್ಣ ತಮ್ಮ ಹಳೆಯ ವೃತ್ತಿಗೆ ಮರಳಿದ್ದಾರೆ. ಚಿಕ್ಕಣ್ಣ ಗಾರೆ ಕೆಲಸ ಮಾಡುತ್ತಿದ್ದಾರೆ. ಆದರೆ, ಈ ಬಾರಿ ಚಿಕ್ಕಣ್ಣ ಬೇರೆಯವರ ಮನೆಯ ಗಾರೆ ಕೆಲಸ ಮಾಡುತ್ತಿಲ್ಲ. ಬದಲಿಗೆ ತಮ್ಮದೇ ತೋಟದ ಮನೆಯ ಗಾರೆ ಕೆಲಸ ಮಾಡುತ್ತಿದ್ದಾರೆ. ಮೈಸೂರಿನ ಬಳಿ ದೊಡ್ಡ ಫಾರ್ಮ್ ನಿರ್ಮಿಸಿರುವ ಚಿಕ್ಕಣ್ಣ ಅಲ್ಲಿಯೇ ಸಣ್ಣದೊಂದು ಮನೆ ನಿರ್ಮಾಣ ಮಾಡುತ್ತಿದ್ದು, ಮನೆ ನಿರ್ಮಾಣ ಕಾರ್ಯಕ್ಕೆ ತಾವೇ ಕೈ ಜೋಡಿಸಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಚಿತ್ರೀಕರಣ ಇಲ್ಲದ ಕಾರಣ ಸಮಯದ ಸದುಪಯೋಗಕ್ಕಾಗಿ ಗಾರೆ ಕೆಲಸ ಮಾಡುತ್ತಿದ್ದಾರೆ. ನಟ ಚಿಕ್ಕಣ್ಣ ಗಾರೆ ಕೆಲಸ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಚಿಕ್ಕಣ್ಣನ ಈ ಕಾರ್ಯಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.