ವಿಜಯಸಾಕ್ಷಿ ಸುದ್ದಿ, ಗದಗ:
ಇಲ್ಲಿನ ಜಿಮ್ಸ್ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಸೇರಿದಂತೆ ಸೋಮವಾರ 16 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಇನ್ನು ನಗರ ಪ್ರದೇಶದಲ್ಲಷ್ಟೇ ಪತ್ತೆಯಾಗುತ್ತಿದ್ದ ಕೋವಿಡ್ ಇದೀಗ ಗ್ರಾಮೀಣ ಭಾಗಕ್ಕೂ ಕಾಲಿಟ್ಟಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ.
ಗದಗನ ಎಸ್.ಎಂ.ಕೃಷ್ಣ ನಗರ, ಪಂಚಾಕ್ಷರಿ ನಗರ, ಕಳಸಾಪುರ ರಸ್ತೆ, ಮುಂಡರಗಿ ತಾಲ್ಲೂಕಿನ ಬಾಗೇವಾಡಿ, ಗಜೇಂದ್ರಗಡದ ನಿವಾಸಿಗಳು ಸೇರಿದಂತೆ 16 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.
ಸೋಮವಾರದವರೆಗೆ ಜಿಲ್ಲೆಯಲ್ಲಿ ಸೋಂಕಿನ ಪರೀಕ್ಷೆಗಾಗಿ 695220 ಮಾದರಿ ಸಂಗ್ರಹಿಸಿದ್ದು, 669079 ಮಾದರಿಗಳು ನಕಾರಾತ್ಮಕವಾಗಿವೆ.
ಸೋಮವಾರದ 16 ಪ್ರಕರಣ ಸೇರಿ ಒಟ್ಟು 26,143 ಜನರಿಗೆ ಸೋಂಕು ದೃಢಪಟ್ಟಿದೆ. ಇದುವರೆಗೂ ಸೋಂಕಿನಿಂದ 319 ಜನ ಮೃತಪಟ್ಟಿದ್ದಾರೆ. ಇಂದಿನ ಮೂವರು ಸೇರಿ ಒಟ್ಟು 25,758 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ 66 ಸಕ್ರಿಯ ಪ್ರಕರಣಗಳಿದ್ದು, ಗದಗನ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.