ಮತ್ತೆ ದೆಹಲಿಗೆ ಟೂರ್ ಹೋದ ಅತೃಪ್ತ ಶಾಸಕರು!

0
Spread the love

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

Advertisement

ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ನಾಯಕತ್ವ ಬದಲಾವಣೆ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಇನ್ನು ಎರಡು ವರ್ಷಗಳ ಕಾಲ ತಾನೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತೇನೆ ಎಂದು ಹೇಳಿಕೆ ನೀಡಿದ್ದ ಸಿಎಂ, ಎಲ್ಲ ವಿಷಯಗಳಿಗೆ ಫುಲ್ ಸ್ಟಾಪ್ ಇಡಲು ಪ್ರಯತ್ನಿಸಿದ್ದರು. ಆದರೆ, ಮತ್ತೆ ಅತೃಪ್ತ ಶಾಸಕರು ದೆಹಲಿಗೆ ಟೂರ್ ಹೋಗಿದ್ದಾರೆ. ಇದರೊಂದಿಗೆ ಸಿಎಂ ಬದಲಾವಣೆ ವಿಚಾರ ತೆರೆ ಮರೆಗೆ ಸರಿಯುತ್ತದೆ ಎನ್ನುವಾಗಲೇ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಭೇಟಿ ನೀಡುವುದಾಗಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ವಿರೋಧಿ ಬಣ ಫುಲ್ ಆ್ಯಕ್ಟಿವ್ ಆದಂತಿದೆ. ಇದೀಗ ಶಾಸಕ ಅರವಿಂದ್ ಬೆಲ್ಲದ್ ಕೂಡ ದೆಹಲಿಗೆ ಹಾರಿದ್ದಾರೆ.

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭೇಟಿಗಾಗಿ ಅರವಿಂದ್ ಬೆಲ್ಲದ್, ದೆಹಲಿಗೆ ತೆರಳಿದ್ದಾರೆ. ಜೂನ್ 16 ಅಥವಾ 17 ರಂದು ರಾಜ್ಯಕ್ಕೆ ಅರುಣ್ ಸಿಂಗ್ ಭೇಟಿ ನೀಡುವುದಾಗಿ ಹೇಳಿದ್ದಾರೆ. ಆ ವೇಳೆ ಶಾಸಕಾಂಗ ಪಕ್ಷದ ಸಭೆ ಕರೆಯಬೇಕು ಎಂದು ಅರವಿಂದ್ ಬೆಲ್ಲದ್ ಒತ್ತಾಯಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಈ ಶಾಸಕಾಂಗ ತಪ್ಪಿಸಲು ಕೊರೊನಾ ನೆಪ ಹೇಳಬಹುದು. ಅದಕ್ಕೆ ಹೈಕಮಾಂಡ್ ಕೇರ್ ಮಾಡದೇ ಪಕ್ಷದ ಹಿತದೃಷ್ಟಿಯಿಂದ ಶಾಸಕಾಂಗ ಪಕ್ಷದ ಸಭೆ ನಡೆಸಬೇಕು ಎಂದು ಅರುಣ್ ಸಿಂಗ್ ಅವರ ಮನವಲಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅರವಿಂದ್ ಬೆಲ್ಲದ್ ದೆಹಲಿಗೆ ಹೋದ ಬೆನ್ನಲ್ಲಿಯೇ ಇತ್ತ ರಾಜ್ಯದಲ್ಲಿಯೂ ಯಡಿಯೂರಪ್ಪ ವಿರೋಧಿ ಬಣ ಫುಲ್ ಆ್ಯಕ್ಟಿವ್ ಆಗಿದೆ.

ದೆಹಲಿ ಭೇಟಿ ಬಗ್ಗೆ ಶಾಸಕ ಅರವಿಂದ್ ಬೆಲ್ಲದ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ‘ನಾನು ಕುಟುಂಬದ ಖಾಸಗಿ ಕಾರ್ಯಕ್ರಮದ ನಿಮಿತ್ತ ದೆಹಲಿಗೆ ಭೇಟಿ ನೀಡುತ್ತಿದ್ದು, ನನ್ನ ದೆಹಲಿಯ ಭೇಟಿಗೂ ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೂ ಸಿಎಂ ಬದಲಾವಣೆ ಸುದ್ದಿ ಮಾತ್ರ ಹೆಚ್ಚಿನ ಸದ್ದು ಮಾಡುತ್ತಿದೆ.

ಸಿಎಂ ಬದಲಾವಣೆ ವಿಚಾರದಲ್ಲಿ ಅರವಿಂದ್ ಬೆಲ್ಲದ್ ಹೆಸರು ಕೇಳಿ ಬಂದಿತ್ತು. ಈ ಹಿಂದೆ ಉಪಚುನಾವಣೆಯ ಬಳಿಕ ಯಡಿಯೂರಪ್ಪ ಅವರಿಗೆ ಎರಡನೇ ಬಾರಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆ ಸೇರಿದಾಗ ಬೆಲ್ಲದ್, ಯತ್ನಾಳ್ ಹಾಗೂ ಕೆಲವು ನಾಯಕರು ರಹಸ್ಯ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿತ್ತು. ಅದೇ ರೀತಿ, ಯಡಿಯೂರಪ್ಪ ನಂತರದಲ್ಲಿ ಕರ್ನಾಟಕದ ಬಿಜೆಪಿಗೆ ಪರ್ಯಾಯ ನಾಯಕ ಯಾರು ಎಂಬ ಪ್ರಶ್ನೆಗೆ ಜಾತಿವಾರು ಲೆಕ್ಕಾಚಾರದಲ್ಲಿ ಅರವಿಂದ್ ಬೆಲ್ಲದ್ ಗೆ ಒಂದಷ್ಟು ಅವಕಾಶಗಳಿವೆ. ಹೀಗಾಗಿ ಅವರು ಸಿಎಂ ಗದ್ದುಗೆಗೆ ಟವೆಲ್ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಊಹಾಪೋಹಗಳು ಕೂಡ ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿವೆ.


Spread the love

LEAVE A REPLY

Please enter your comment!
Please enter your name here