ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಕೊರೊನಾ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತೆ ಲಾಕ್ ಡೌನ್ ಘೋಷಣೆ ಮಾಡಿದೆ. ಸದ್ಯ ಘೋಷಣೆಯಾಗಿರುವ ಲಾಕ್ ಡೌನ್ ನಿಂದಾಗಿ ಕೊರೊನಾ ಹತೋಟಿಗೆ ಬರುತ್ತಿದೆ. ಹೀಗಾಗಿ ಸರ್ಕಾರ ಲಾಕ್ ಡೌನ್ ಮುಂದುವರೆಸಲು ಚಿಂತನೆ ನಡೆಸಿದೆ ಎನ್ನಲಾಗಿದೆ.
ಲಾಕ್ ಡೌನ್ ಗೂ ಮುನ್ನ ಸರ್ಕಾರ ಜನತಾ ಕರ್ಫ್ಯೂ ಜಾರಿಗೊಳಿಸಿತ್ತು. ಆದರೆ, ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತ ಸಾಗಿತೇ ಹೊರತು, ಕಡಿಮೆಯಾಗಿರಲಿಲ್ಲ. ಕರ್ಫ್ಯೂ ಸಂದರ್ಭದಲ್ಲಿಯೂ ಜನ – ಜೀವನ ಎಂದಿನಂತೆಯೇ ಇತ್ತು. ಹೀಗಾಗಿ ಕೊರೊನಾ ಹತೋಟಿಗಾಗಿ ಲಾಕ್ ಡೌನ್ ಜಾರಿ ಮಾಡಲಾಗಿತ್ತು. ಇದು ಈಗಾಗಲೇ ಜಾರಿಯಾಗಿ 4 ದಿನಗಳು ಕಳೆಯುತ್ತಿವೆ. ಆದರೆ, ಅಷ್ಟರಲ್ಲಿಯೇ ಕೊರೊನಾ ಹತೋಟಿಗೆ ಬರಲು ಪ್ರಾರಂಭವಾಗಿದೆ. ಹೀಗಾಗಿ ಸರ್ಕಾರ ಸಂಪೂರ್ಣವಾಗಿ ಕೊರೊನಾ ಹತೋಟಿಗೆ ಬರುವವರೆಗೂ ಲಾಕ್ ಡೌನ್ ಘೋಷಿಸಲು ಚಿಂತನೆ ನಡೆಸಿದೆ.
ಅಲ್ಲದೇ, ಈಗಿರುವ ಲಾಕ್ ಡೌನ್ ನ್ನು ಇನ್ನಷ್ಟು ಕಠಿಣ ಮಾಡಬೇಕೆಂದು ಕೂಡ ಈಗಾಗಲೇ ಸಚಿವರ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸದ್ಯ ಲಾಕ್ ಡೌನ್ ಕಠಿಣವಾಗಿದ್ದರೂ ಜನರು ಅನಾವಶ್ಯಕವಾಗಿ ಹೊರಗೆ ಓಡಾಡುತ್ತಿದ್ದಾರೆ. ಪ್ರತಿದಿನ ದಿನಸಿ ಅಂಗಡಿ ಇದ್ದರು ಒಂದೇ ದಿನ ಎಲ್ಲ ಕೊಂಡುಕೊಳ್ಳಲು ಜನರು ಬರುತ್ತಿದ್ದಾರೆ. ಅಲ್ಲದೇ, ದಿನಂಪ್ರತಿ ಒಂದಿಲ್ಲೊಂದು ಕಾರಣ ಹೇಳಿ ಜನರು ಹೊರಗೆ ತಿರುಗಾಡುತ್ತಿದ್ದಾರೆ.
ಸದ್ಯದ ಲಾಕ್ ಡೌನ್ ಮೇ. 24ರ ವರೆಗೂ ಇರಲಿದೆ. ಈ ಲಾಕ್ ಡೌನ್ ನ್ನು ಇನ್ನಷ್ಟು ಕಠಿಣಗೊಳಿಸಿ, ಇನ್ನಷ್ಟು ದಿನ ಲಾಕ್ ಡೌನ್ ಮುಂದುವರೆಸಲು ಚಿಂತನೆ ನಡೆಸಲಾಗಿದೆ ಎಂದು ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.