ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ

-ಕನಕಗಿರಿಯಲ್ಲಿ ಶಾಸಕ ದಢೇಸೂಗುರುಗೆ ಮುಖಭಂಗ
-ಉಸ್ತುವಾರಿ ಸಚಿವ ಹಾಲಪ್ಪ ಕ್ಷೇತ್ರದ ಕುಕನೂರಿನಲ್ಲಿ ಸಮಬಲ!!
–ಬಸವರಾಜ ಕರುಗಲ್,
ವಿಜಯಸಾಕ್ಷಿ ವಿಶೇಷ, ಕೊಪ್ಪಳ: ಸ್ಥಳೀಯ ಸಂಸ್ಥೆಗಳ ಸಂಗ್ರಾಮಕ್ಕೆ ತೆರೆ ಬಿದ್ದಿದೆ. ಕೊಪ್ಪಳ ಜಿಲ್ಲೆಯ 5 ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು ಮೇಲ್ನೋಟಕ್ಕೆ ಕೈ ಮುಂದಿದೆಯಾದರೂ, ನಾಲ್ಕು ಕಡೆ ಗದ್ದುಗೆ ಮಾತ್ರ ಬಿಜೆಪಿಯದ್ದೇ ಎನ್ನುವ ವಾತಾವರಣ ಸದ್ಯಕ್ಕಿದೆ.
ಜಿಲ್ಲೆಯ ಕನಕಗಿರಿ, ಭಾಗ್ಯನಗರ, ಕುಕನೂರು ಮತ್ತು ತಾವರಗೇರಾ ಪಟ್ಟಣ ಪಂಚಾಯಿತಿ ಹಾಗೂ ಕಾರಟಗಿ ಪುರಸಭೆ ಸೇರಿದಂತೆ 5 ಸ್ಥಳೀಯ ಸಂಸ್ಥೆಗಳ 96 ವಾರ್ಡ್‌ಗಳ ಚುನಾವಣಾ ಫಲಿತಾಂಶ ಬಂದಿದ್ದು 49ರಲ್ಲಿ ಕಾಂಗ್ರೆಸ್, 41ರಲ್ಲಿ ಬಿಜೆಪಿ, 1ರಲ್ಲಿ ಜೆಡಿಎಸ್ ಹಾಗೂ 5 ವಾರ್ಡ್‌ಗಳಲ್ಲಿ ಪಕ್ಷೇತರರು ಗೆಲುವಿನ ನಗೆ ಬೀರಿದ್ದಾರೆ.
ಕಳೆದ ಅವಧಿಯಲ್ಲಿ ಜಿಲ್ಲೆಯ ಈ ಐದೂ ಸ್ಥಳೀಯ ಸಂಸ್ಥೆಗಳ ಪೈಕಿಯ 96 ವಾರ್ಡ್‌ಗಳಲ್ಲಿ 50ರಲ್ಲಿ ಕಾಂಗ್ರೆಸ್, 40ರಲ್ಲಿ ಬಿಜೆಪಿ ಹಾಗೂ 6 ಕಡೆ ಪಕ್ಷೇತರರು ಚುನಾಯಿತರಾಗಿದ್ದರು. ಜೆಡಿಎಸ್, ಖಾತೆಯನ್ನೇ ತೆರೆದಿರಲಿಲ್ಲ.
ಕಳೆದ ಅವಧಿಯ ಚುನಾವಣಾ ಫಲಿತಾಂಶಕ್ಕೆ ಹೋಲಿಸಿದರೆ ಕಾಂಗ್ರೆಸ್‌ಗೆ 1 ಕಡೆ ನಷ್ಟವಾದರೆ, ಬಿಜೆಪಿಗೆ 1 ಕಡೆ ಲಾಭ ಆಗಿದೆ. ಜೆಡಿಎಸ್ ಸಹ 1 ಕಡೆ ಖಾತೆ ತೆರೆದಿದ್ದು ಸಾಧನೆಯೇ ಸರಿ.
ಎಲ್ಲೆಲ್ಲಿ ಯಾವ್ಯಾವ ಪಕ್ಷಕ್ಕೆ ಗದ್ದುಗೆ?
ಕಾರಟಗಿ ಪುರಸಭೆಯ 23 ಸ್ಥಾನಗಳ ಪೈಕಿ ಹಿಂದಿನ ಅವಧಿಯಲ್ಲಿ 12 ಕಾಂಗ್ರೆಸ್, 10 ಬಿಜೆಪಿ ಹಾಗೂ 1 ಪಕ್ಷೇತರ ಇದ್ದು ಎರಡೂ ಪಕ್ಷಗಳು ಅಧಿಕಾರ ಅನುಭವಿಸಿದ್ದವು. ಈ ಅವಧಿಗೆ ಕಾಂಗ್ರೆಸ್ ಮತ್ತು ಬಿಜೆಪಿ ತಲಾ 11 ಸ್ಥಾನಗಳನ್ನು ಗಳಿಸಿದ್ದು, ಒಂದು ಸ್ಥಾನ ಜೆಡಿಎಸ್‌ಗೂ ಲಭಿಸಿದೆ. ಜೆಡಿಎಸ್ ಇಲ್ಲಿ ನಿರ್ಣಾಯಕವಾಗಿದ್ದು, ಬಹುತೇಕ ಬಿಜೆಪಿಯ ಪಾಲಿಗೆ ಗದ್ದುಗೆ ಸಿಗಲಿದೆ.
ಕನಕಗಿರಿ ಪಟ್ಟಣ ಪಂಚಾಯಿತಿಯ 17 ಸ್ಥಾನಗಳ ಪೈಕಿ ಹಿಂದಿನ ಅವಧಿಯಲ್ಲಿ 9 ಕಾಂಗ್ರೆಸ್, 5 ಬಿಜೆಪಿ ಮತ್ತು 3 ಪಕ್ಷೇತರ ಇದ್ದು, ಎರಡೂ ಪಕ್ಷಗಳು ಅಧಿಕಾರ ಅನುಭವಿಸಿದ್ದವು. ಈ ಅವಧಿಗೆ 12 ಕಾಂಗ್ರೆಸ್ ಹಾಗೂ 5 ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದು, ಗದ್ದುಗೆ ಬಹುತೇಕ ಕಾಂಗ್ರೆಸ್ ಪಾಲಾಗಿದೆ. ಆದರೆ ಆಡಳಿತಾರೂಢ ಸರಕಾರ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಯಾವ ವರ್ಗಕ್ಕೆ ನೀಡುತ್ತದೆ ಎಂಬುದರ ಮೇಲೆ ಅದು ನಿಂತಿದೆ.
ಕೊಪ್ಪಳ ವಿಧಾನಸಭಾ ಕ್ಷೇತ್ರದ ಭಾಗ್ಯನಗರ ಪಟ್ಟಣ ಪಂಚಾಯತಿಯ 19 ಸ್ಥಾನಗಳಿಗೆ ಸಂಬಂಧಿಸಿದಂತೆ ಹಿಂದಿನ ಅವಧಿಗೆ 8 ರಲ್ಲಿ ಕಾಂಗ್ರೆಸ್, 10ರಲ್ಲಿ ಬಿಜೆಪಿ ಹಾಗೂ 1 ಪಕ್ಷೇತರ ಆಯ್ಕೆಯಾಗಿದ್ದು, ಇಲ್ಲೂ ಸಹ ಎರಡೂ ಪಕ್ಷಗಳು ಅಧಿಕಾರ ಅನುಭವಿಸಿವೆ. ಈ ಬಾರಿ ಮತ್ತೇ 8 ರಲ್ಲಿ ಕಾಂಗ್ರೆಸ್, 9ರಲ್ಲಿ ಬಿಜೆಪಿ ಹಾಗೂ 2 ಪಕ್ಷೇತರರು ಆಯ್ಕೆಯಾಗಿದ್ದು, ಪಕ್ಷೇತರರು ಯಾವ ಪಕ್ಷದ ಕಡೆ ವಾಲುತ್ತಾರೊ, ಅದೇ ಪಕ್ಷ ಗದ್ದುಗೆಗೆ ಏರಲಿದೆ. ಕಮಲ ಅಧಿಕಾರಕ್ಕೆ ಬರುವುದು ಬಹುತೇಕ ಫೈನಲ್.
ಕುಷ್ಟಗಿ ವಿಧಾನಸಭಾ ಕ್ಷೇತ್ರದ ತಾವರಗೇರಾ ಪಟ್ಟಣ ಪಂಚಾಯಿತಿಯ 18 ಸ್ಥಾನಗಳಲ್ಲಿ ಹಿಂದಿನ ಅವಧಿಗೆ 10 ಕಾಂಗ್ರೆಸ್, 7 ಬಿಜೆಪಿ ಹಾಗೂ 1 ಪಕ್ಷೇತರ ಆಯ್ಕೆಯಾಗಿದ್ದು ಕಾಂಗ್ರೆಸ್ ಆಡಳಿತ ನಡೆಸಿತ್ತು. ಈ ಸಲ 8ರಲ್ಲಿ ಕಾಂಗ್ರೆಸ್, 7ರಲ್ಲಿ ಬಿಜೆಪಿ, 3 ಪಕ್ಷೇತರರು ಆಯ್ಕೆಯಾಗಿದ್ದು, ಪಕ್ಷೇತರರೇ ನಿರ್ಣಾಯಕ. ಇಲ್ಲೂ ಸಹ ಈ ಸಲ ಬಿಜೆಪಿಯೇ ಗದ್ದುಗೆ ಹಿಡಿಯುವ ಸಾಧ್ಯತೆಗಳು ನಿಶ್ಚಳವಾಗಿವೆ.
ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಕುಕನೂರು ಪಟ್ಟಣ ಪಂಚಾಯಿತಿಯ 19 ಸ್ಥಾನಗಳ ಪೈಕಿ ಹಿಂದಿನ ಅವಧಿಗೆ 11 ಕಾಂಗ್ರೆಸ್, 8 ಬಿಜೆಪಿ ಸ್ಥಾನಗಳಿದ್ದು ಎರಡೂ ಪಕ್ಷಗಳು ಅಧಿಕಾರ ಕಂಡಿದ್ದವು. ಈ ಸಲ 10 ಕಾಂಗ್ರೆಸ್, 9 ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದು, ಮೇಲ್ನೋಟಕ್ಕೆ ಕಾಂಗ್ರೆಸ್ ಮುಂಚೂಣಿ ಎನಿಸಿದರೂ ಉಸ್ತುವಾರಿ ಸಚಿವರ ಕ್ಷೇತ್ರ ಆಗಿರುವುದರಿಂದ ಗದ್ದುಗೆ ಗುದ್ದಾಟ ನಿಶ್ಚಿತ. ಸಂಸದ, ಶಾಸಕ ಹಾಗೂ ವಿಧಾನ ಪರಿಷತ್ ಸದಸ್ಯ ಮತ ಚಲಾಯಿಸಿದರೂ ಸಮಬಲವನ್ನ ಇಲ್ಲಿ ಕಾಣಬಹುದು. ಈ ಸ್ಥಳೀಯ ಸಂಸ್ಥೆ ಯಾವ ಪಕ್ಷದ ಪಾಲಾಗಲಿದೆ ಎಂಬುದು ಮಾತ್ರ ಕುತೂಹಲದ ಸಂಗತಿಯಾಗಿ ಉಳಿದುಕೊಂಡಿದೆ.