ವಿಜಯಸಾಕ್ಷಿ ಸುದ್ದಿ, ದಾವಣಗೆರೆ
ರಾಜ್ಯದಲ್ಲಿ ಮಹಾಮಾರಿಯ ಎರಡನೇ ಅಲೆಯ ಕಾಟ ಶುರುವಾದಾಗಿನಿಂದ ಸಾವು – ನೋವುಗಳೇ ಹೆಚ್ಚಾಗುತ್ತಿವೆ. ಕೊರೊನಾದೊಂದಿಗೆ ರೂಂಪಾತರ ವೈರಸ್, ಬ್ಲ್ಯಾಕ್ ಫಂಗಸ್ ನಂತಹ ಬಾಧೆ ಜನರನ್ನು ಮತ್ತಷ್ಟು ನಿತ್ರಾಣಗೊಳಿಸುತ್ತಿವೆ. ಇದರೊಂದಿಗೆ ಆಕ್ಸಿಜನ್ ಕೊರತೆ, ಜನರ ಪ್ರಾಣವನ್ನೇ ಕಸಿದುಕೊಳ್ಳುತ್ತಿದೆ. ಈ ಮಧ್ಯೆ ಹಲವು ಜನನಾಯಕರು ಇದಕ್ಕೂ ನಮಗೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿದ್ದರೆ, ಹಲವರು ಮಾತ್ರ ಹಗಲಿರುಳು ಜನ ಸೇವೆ ಮಾಡುತ್ತಿದ್ದಾರೆ. ಈ ಸಾಲಿಗೆ ಶಾಸಕ ರೇಣುಕಾರ್ಯ ಅವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ ಎಂದರೆ ಬಹುಶಃ ತಪ್ಪಾಗಲಾರದು.
ಇತ್ತೀಚೆಗಷ್ಟೇ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರು, ತಾಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಉಂಟಾದಾಗ ಮಧ್ಯರಾತ್ರಿ ಧಾವಿಸಿ ತಮ್ಮದೇ ಕಾರಿನಲ್ಲಿ ಆಕ್ಸಿಜನ್ ಪೂರೈಕೆ ಮಾಡಿದ್ದರು. ಸದ್ಯ ಮತ್ತ ಇಂತಹ ಕೆಲಸ ಮಾಡಿರುವ ಅವರು ಸುಮಾರು 45 ಜನ ಕೊರೊನಾ ರೋಗಿಗಳ ಪ್ರಾಣ ರಕ್ಷಿಸಿದ್ದಾರೆ.
ಎಂ.ಪಿ.ರೇಣುಕಾಚಾರ್ಯ ಅವರ ಸಮಯಪ್ರಜ್ಞೆಯಿಂದಾಗಿ ಸುಮಾರು 45 ಜನರು ಬದುಕುಳಿದಿದ್ದಾರೆ. ಹೊನ್ನಾಳಿ ತಾಲೂಕು ಆಸ್ಪತ್ರೆಗೆ ಮಧ್ಯರಾತ್ರಿ ತಮ್ಮ ಸ್ವಂತ ಖರ್ಚಿನಲ್ಲಿ 25 ಆಕ್ಸಿಜನ್ ಸಿಲಿಂಡರ್ ಗಳನ್ನು ಪೂರೈಕೆ ಮಾಡಿದ್ದಾರೆ.
ಆಸ್ಪತ್ರೆಯಲ್ಲಿ ತಡರಾತ್ರಿ ಆಕ್ಸಿಜನ್ ಕೊರತೆ ಉಂಟಾಗಿತ್ತು. ಕೂಡಲೇ ಎಚ್ಚೆತ್ತ ವೈದ್ಯರು ಮೆಡಿಕಲ್ ಆಕ್ಸಿಜನ್ ಕೊರತೆ ಬಗ್ಗೆ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಕೂಡಲೇ ಭದ್ರಾವತಿ, ಹರಿಹರದಿಂದ ಮೆಡಿಕಲ್ ಆಕ್ಸಿಜನ್ ತರಲು ವ್ಯವಸ್ಥೆ ಮಾಡಿದ್ದಾರೆ. ಈ ಆಸ್ಪತ್ರೆಯಲ್ಲಿ ಒಟ್ಟು 45 ಜನ ಆಕ್ಸಿಜನ್ ಬೆಡ್ ನಲ್ಲಿದ್ದ ಕಾರಣ ಅವರೆಲ್ಲರ ಪ್ರಾಣ ಉಳಿಸಿದ್ದಾರೆ.
ಈ ಹಿಂದೆ ರಾತ್ರೋರಾತ್ರಿ ತಮ್ಮ ವಾಹನದಲ್ಲಿಯೇ ಆಕ್ಸಿಜನ್ ತಂದು, 20 ಜನರ ಪ್ರಾಣ ರಕ್ಷಿಸಿದ್ದರು. ಈಗ ಮತ್ತೆ ಅಂತಹ ಕಾರ್ಯಕ್ಕೆ ಪಾತ್ರರಾಗಿದ್ದಾರೆ. ಹೀಗಾಗಿ ಎಲ್ಲರೂ ಶಾಸಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.