ವಿಜಯಸಾಕ್ಷಿ ಸುದ್ದಿ, ಚಿಕ್ಕಮಗಳೂರು
ಮಲೆನಾಡು ಪ್ರದೇಶದಲ್ಲಿ ಮಳೆರಾಯ ತನ್ನ ಅಟ್ಟಹಾಸ ಮೆರೆಯುತ್ತಿದ್ದಾನೆ. ಹೀಗಾಗಿ ಜನ – ಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿದೆ. ಜಿಲ್ಲೆಯ ಕಳಸ ತಾಲೂಕಿನ ಕುದುರೆಮುಖ ಸುತ್ತಮುತ್ತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತುಂಗಾ-ಭದ್ರಾ ನದಿಗಳು ಮೈ ತುಂಬಿ ಹರಿಯುತ್ತಿವೆ. ಭದ್ರಾ ನದಿ ಹರಿವಿನ ಪ್ರಾಮಾಣದಲ್ಲಿ ಭಾರೀ ಏರಿಕೆಯಾಗಿದೆ.
ಹೊರನಾಡು-ಕಳಸ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಮುಳುಗುವ ಹಂತಕ್ಕೆ ಬಂದಿದೆ. ಒಂದು ವೇಳೆ ಈ ಸೇತುವೆ ಮುಳುಗಡೆಯಾದರೆ ಹೊರನಾಡು, ಕಳಸ, ಮಾವಿನಹೊಳೆ, ಮೆಣಸಿನಹಾಡ್ಯ, ತುರಾ, ಬಲಿಗೆ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳ ಸಂಪರ್ಕವೇ ಕಡಿತಗೊಳ್ಳುತ್ತದೆ. ಜಿಲ್ಲೆಯ ಮಲೆನಾಡು ತಾಲೂಕುಗಳಾದ ಕೊಪ್ಪ, ಶೃಂಗೇರಿ, ಮೂಡಿಗೆರೆ, ಎನ್.ಆರ್. ಪುರ ತಾಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ.
ಹಲವೆಡೆ ಗಾಳಿ ಕೂಡ ವಿಪರೀತವಾಗಿ ಸುರಿಯುತ್ತಿದೆ. ಮುಗ್ರಹಳ್ಳಿ ಸೇತುವೆ ಕೊಚ್ಚಿ ಹೋಗುವ ಭೀತಿ ಎದುರಾಗಿದೆ. ಮೂಡಿಗೆರೆ ತಾಲೂಕಿನ ನಿಡುವಾಳೆ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗವಿದ್ದ ಬೃಹತ್ ಮರಗಳು ಗಾಳಿಯಿಂದ ಧರೆಗುರುಳಿವೆ. ಬಿದರಹಳ್ಳಿ ಬಳಿ ಭಾರೀ ಗಾಳಿ ಹಾಗೂ ಮಳೆಯಿಂದ ಚಾಲಕರ ನಿಯಂತ್ರಣ ತಪ್ಪಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ವಿದ್ಯುತ್ ಕಂಬಗಳು ಧರೆಗುರುಳಿದ್ದು, ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.