ವಿಜಯಸಾಕ್ಷಿ ಸುದ್ದಿ, ಹಾವೇರಿ
ಕೊರೊನಾದಿಂದಾಗಿ ಸದ್ಯ ರಾಜ್ಯದಲ್ಲಿ ರೈತರ ಬದುಕು ಬೀದಿಗೆ. ಇದರ ಮಧ್ಯೆ ಸದ್ಯ ಮಳೆ ಕೂಡ ರೈತರನ್ನು ಬೀದಿಗೆ ತಂದು ನಿಲ್ಲಿಸಿದೆ.
ಜಿಲ್ಲೆಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಹಲವೆಡೆ ಮೆಣಸಿನಕಾಯಿ ಬೆಳೆದ ರೈತರನ್ನು ಚಿಂತೆಗೆ ದೂಡಿದೆ. ಈ ಮಳೆಯಿಂದಾಗಿ ಜಿಲ್ಲೆಯ ಹಾನಗಲ್ ತಾಲೂಕಿನ ಹೆರೂರು ಗ್ರಾಮದ ರೈತನ ಸ್ಥಿತಿ ಬೀದಿಗೆ ಬಂದಿದೆ.
ಹೆರೂರು ಗ್ರಾಮದ ರೈತ ಮಲ್ಲಪ್ಪ ಬಡಿಗೇರ ಎಂಬುವವರು ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆದಿದ್ದರು. ನಿನ್ನೆ ಸುರಿದ ಮಳೆಯಿಂದಾಗಿ ಜಮೀನು ಅಕ್ಷರಶಃ ಕೆರೆಯಂತೆ ಆಗಿದೆ. ಜಮೀನಿನ ತುಂಬ ನೀರು ತುಂಬಿಕೊಂಡಿದೆ. ಈ ಭೂಮಿಯಲ್ಲಿ ಬೆಳೆದಿದ್ದ ಮೆಣಸಿನಕಾಯಿ ಬೆಳೆ ನೀರಿನಲ್ಲಿ ಮುಳುಗಿ ಹೋಗಿದೆ. ಒಂದೂವರೆ ಎಕರೆಯಲ್ಲಿ ಮೆಣಸಿನಕಾಯಿ ಬೆಳೆಯಲಾಗಿತ್ತು. ಇದಕ್ಕಾಗಿ ಸುಮಾರು ರೂ. 60 ಸಾವಿರ ಖರ್ಚು ಮಾಡಿದ್ದರು.
ಈ ಬೆಳೆಯನ್ನು ರೈತ ಜೋಪಾನವಾಗಿ ನೋಡಿಕೊಂಡಿದ್ದರು. ಸಮಯಕ್ಕೆ ಸರಿಯಾಗಿ ಕ್ರಿಮಿನಾಶಕ ಹಾಗೂ ಗೊಬ್ಬರ ಹಾಕಿ ಬೆಳೆಸಿದ್ದರು. ಸದ್ಯ ಮೆಣಸಿನಕಾಯಿ ಬೆಳೆದು ನಿಂತಿತ್ತು. ಈಗಾಗಲೇ ಮೆಣಸಿನಕಾಯಿ ಕಟಾವು ಮಾಡಬೇಕಿತ್ತು. ಆದರೆ, ಲಾಕ್ ಡೌನಿಂದಾಗಿ ಖರೀದಿದಾರರು ಇಲ್ಲದ್ದಕ್ಕೆ ಕಟಾವು ಮಾಡುವುದು ತಡವಾಗಿತ್ತು. ಆದರೆ, ಕೈಗೆ ಬಂದಷ್ಟು ಬರಲಿ ಎಂದು ರೈತರ ಕಟಾವು ಮಾಡಲು ನಿರ್ಧರಿಸಿದ್ದರು. ಅಷ್ಟರೊಳಗೆ ಮಳೆ ಎಲ್ಲವನ್ನೂ ಆಹುತಿ ಮಾಡಿಕೊಂಡಿದೆ.
ಜಮೀನಿನಲ್ಲಿ ನಿಂತಿರುವ ನೀರು ಕಡಿಮೆಯಾಗಲು ಕನಿಷ್ಟ ನಾಲ್ಕೈದು ದಿನಗಳಾದರೂ ಬೇಕು. ಅಷ್ಟರಲ್ಲಿ ಬೆಳೆ ಸಂಪೂರ್ಣವಾಗಿ ಕೊಳೆತು ಹೋಗುತ್ತದೆ. ಅವರಿವರ ಬಳಿ ಸಾಲ ಮಾಡಿಕೊಂಡು ಮೆಣಸಿನಕಾಯಿ ಬೆಳೆ ಬೆಳೆದಿದ್ದ ರೈತ, ಚಿಂತೆಯಲ್ಲಿ ಮುಳುಗಿದ್ದಾನೆ.
ಒಂದೂವರೆ ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆದಿದ್ದೆ. ಒಮ್ಮೆಯೂ ಕಟಾವು ಮಾಡಿರಲಿಲ್ಲ. ಮಾರುಕಟ್ಟೆಯಲ್ಲಿ ಈಗಿರುವ ದರ ನೋಡಿದರೆ ಆಳಿನ ಖರ್ಚು ಆಗುವುದಿಲ್ಲ. ಹೀಗಾಗಿ ಬೆಲೆ ಸಿಕ್ಕ ಮೇಲೆ ಮೆಣಸಿನಕಾಯಿ ಕಟಾವು ಮಾಡಿದರಾಯಿತು ಎಂದು ಬಿಟ್ಟಿದ್ದೆ. ಆದರೆ, ಮಳೆ ಬಂದು ಬೆಳೆಯೊಂದಿಗೆ ಬದುಕನ್ನೂ ಕಿತ್ತುಕೊಂಡಿದೆ ಎಂದು ರೈತ ಕಂಗಾಲಾಗಿದ್ದಾನೆ.