ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರಗುಂದ: ಮಳೆಯಿಂದ ಗ್ರಾಮಕ್ಕೆ ನೀರು ನುಗ್ಗಿದ ಪರಿಣಾಮ ಪರಿಸ್ಥಿತಿ ಅವಲೋಕಿಸಲು ಬಂದ ತಹಸೀಲ್ದಾರ್ ಕಾರ್ ಗೆ ಗ್ರಾಮಸ್ಥರು ಮುತ್ತಿಗೆ ಹಾಕಿದ ಘಟನೆ ತಾಲೂಕಿನ ಹೊಸಬೂದಿಹಾಳ ಗ್ರಾಮದಲ್ಲಿ ನಡೆದಿದೆ.
ರಾತ್ರಿಯಿಡೀ ಸುರಿದ ಮಳೆಗೆ ಹೊಸ ಬೂದಿಹಾಳದ ಮನೆಗಳಿಗೆ ನೀರು ನುಗ್ಗಿ ರಾತ್ರಿಯಿಡೀ ಗ್ರಾಮಸ್ಥರು ಒರಡಾಡಿದ್ದಾರೆ. ಬೆಳಿಗ್ಗೆ ಪರಿಸ್ಥಿತಿ ಅರಿಯಲು ಬಂದ ನರಗುಂದ ತಹಸೀಲ್ದಾರ್ ಎ ಎಚ್ ಮಹೇಂದ್ರ ಅವರ ಕಾರ್ ಗೆ ಆಕ್ರೋಶಗೊಂಡಿದ್ದ ಗ್ರಾಮಸ್ಥರು ಮುತ್ತಿಗೆ ಹಾಕಿದರು.
ಅಷ್ಟೇ ಅಲ್ಲದೇ ಅಲ್ಲಿಗೆ ಬಂದ ಜಿಪಂ ಅಧ್ಯಕ್ಷ ರಾಜುಗೌಡ ಅವರನ್ನೂ ಸಹ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಇತ್ತೀಚೆಗಷ್ಟೇ ಹೊಸ ಬೂದಿಹಾಳ ಗ್ರಾಮಕ್ಕೆ ಗ್ರಾಮಸ್ಥರೆಲ್ಲರೂ ಸ್ಥಳಾಂತರವಾಗಿದ್ದರು. ಆದರೆ ಅಲ್ಲಿಗೂ ಮಳೆ ನೀರು ನುಗ್ಗಿ ಗ್ರಾಮಸ್ಥರು ರಾತ್ರಿಯಿಡೀ ಜಾಗರಣೆ ಮಾಡುವಂತಾಗಿತ್ತು.
ಇನ್ನು ಮುತ್ತಿಗೆ ಹಾಕಿದ ಗ್ರಾಮಸ್ಥರು, ನೀರು ಬರದಂತೆ ತಡೆಗೋಡೆ ನಿರ್ಮಾಣ ಮಾಡುವಂತೆ ಗ್ರಾಮಸ್ಥರು ತಹಸೀಲ್ದಾರ್ ಹಾಗೂ ಜಿಪಂ ಅಧ್ಯಕ್ಷ ರಾಜುಗೌಡರಿಗೆ ಒತ್ತಾಯ ಮಾಡಿದರು. ಗ್ರಾಮಸ್ಥರ ಬೇಡಿಕೆ ಈಡೇರಿಸುವ ಭರವಸೆ ನೀಡಿದ ಬಳಿಕ ತಹಸೀಲ್ದರ್ ಅವರ ಕಾರನ್ನು ಗ್ರಾಮಸ್ಥರು ಬಿಟ್ಟರು.
ತಾತ್ಕಾಲಿಕವಾಗಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕಾಳಜಿ ಕೇಂದ್ರವನ್ನು ತಹಸೀಲ್ದಾರ್ ಅವರ ಸೂಚನೆ ಮೇರೆಗೆ ಆರಂಭ ಮಾಡಲಾಗಿದೆ.