ವಿಜಯಸಾಕ್ಷಿ ಸುದ್ದಿ, ಗದಗ
ಜಿಲ್ಲೆಯ ಗದಗ, ರೋಣ ಹಾಗೂ ಮುಂಡರಗಿ ಸೇರಿದಂತೆ ವಿವಿಧೆಡೆ ಶುಕ್ರವಾರ ಸಂಜೆ ಗುಡುಗು- ಸಿಡಿಲು ಸಹಿತ ಧಾರಾಕಾರವಾಗಿ ಮಳೆ ಸುರಿದಿದೆ.
ರೋಣ ತಾಲೂಕಿನ ಮಾಡಲಗೇರಿ ಗ್ರಾಮದ ಜಮೀನು ಒಂದರಲ್ಲಿ ಕೃಷಿ ಚಟುವಟಿಕೆಯಲ್ಲಿ ನಿರತವಾಗಿದ್ದ ಕೃಷಿ ಕಾರ್ಮಿಕ ಮಹಿಳೆ ಒಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ. ಇತ್ತ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ಮಳೆಯ ರಭಸಕ್ಕೆ ಮಣ್ಣಿನ ಮನೆಯ ಮೇಲ್ಛಾವಣಿ ಕುಸಿದಿದೆ.
ಮನೆಯ ಒಳಗಡೆ ಮಲಗಿಕೊಂಡಿದ್ದ ಕುಟುಂಬದ ಚನ್ನಮ್ಮ ಕಂಬಳಿ, ಅವರ ಮಗ ನವೀನ ಕಂಬಳಿ ಹಾಗೂ ಸೊಸೆ ಸುಜಾತಾ ಎಂಬ ಮೂವರು ಪವಾಡ ಸದೃಶ್ಯ ರೀತಿಯಲ್ಲಿ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಮನೆಯ ಮೇಲ್ಛಾವಣಿ ಕುಸಿಯುತ್ತಿದ್ದಂತಿಯೇ ಮೂವರು ತಡಬಡಿಸಿ ಓಡಿ ಹೊರಬಂದಿದ್ದಾರೆ. ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಳೆಯ ಅವಾಂತರದಿಂದಾಗಿ ಜಿಲ್ಲೆಯಲ್ಲಿನ ಬಹುತೇಕ ಹಳ್ಳ- ಕೊಳ್ಳಗಳು, ಚೆಕ್ ಡ್ಯಾಂಗಳು, ಗೋಕಟ್ಟೆಗಳು ತುಂಬಿ ಹರಿಯುತ್ತಿವೆ. ಕೆಲ ಕಡೆಗಳಲ್ಲಿ ರಸ್ತೆಯ ಮೇಲೆ ಹಳ್ಳದ ನೀರು ರಭಸವಾಗಿ ಹರಿಯುತ್ತಿದ್ದ ಪರಿಣಾಮ ರಾತ್ರಿ ಇಡೀ ಸಂಪರ್ಕ ಕಡಿತಗೊಂಡಿದ್ದು, ಬೆಳಿಗಿನ ಹೊತ್ತಿಗೆ ಸಹಜ ಸ್ಥಿತಿಗೆ ಮರಳಿವೆ.
ಭಾರೀ ಮಳೆಯಿಂದಾಗಿ ಜಮೀನಿನಲ್ಲಿ ಈಗಾಗಲೇ ಕಟಾವಿನ ಹಂತದಲ್ಲಿದ್ದ ಮುಂಗಾರು ಬೇಳೆ ನೆಲಕಚ್ಚಿವೆ. ಕೆಲ ಜಮೀನುಗಳಲ್ಲಿ ನೀರು ನಿಂತುಕೊಂಡಿರುವ ಪರಿಣಾಮ ಬೆಳೆಗಳು ಜಲಾವೃತಗೊಂಡಿವೆ.
