ವಿಜಯಸಾಕ್ಷಿ ಸುದ್ದಿ, ಗದಗ
ಕರ್ನಾಟಕದ ಒಂದಿಂಚಲ್ಲ, ಸೆಂ.ಮೀ. ನಷ್ಟು ಜಾಗ ಬಿಟ್ಟು ಕೊಡಲ್ಲ. ಸುಮ್ಮನೆ ಕನ್ನಡಿಗರನ್ನು ಕೆರಳಿಸಿ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುವ ಹುನ್ನಾರ ನಡೆಸಬೇಡಿ. ಇದರಲ್ಲಿ ರಾಜಕೀಯ ಷಡ್ಯಂತ್ರ ಮಾಡುವುದು ಸರಿಯಲ್ಲ
ಎಂದು ಕರ್ನಾಟಕ ರೈತ ಸೇನಾ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ನರಗುಂದ ಪಟ್ಟಣದ ಮಹದಾಯಿ ವೇದಿಕೆಯಲ್ಲಿ ಈ ಬಗ್ಗೆ ಮಾತನಾಡಿ, ಉದ್ಧವ್ ಠಾಕ್ರೆ ವಿನಾಕಾರಣ ಹೇಳಿಕೆ ನೀಡುವುದನ್ನು ಬಿಟ್ಟು ಮಹಾರಾಷ್ಟ್ರ ರಾಜ್ಯದ ಅಭಿವೃದ್ಧಿ ಕಡೆ ಗಮನಹರಿಸಲಿ. ಕರ್ನಾಟಕದ ಬಗ್ಗೆ ಮಾತನಾಡುವ ಹಕ್ಕು ಅವರಿಗಿಲ್ಲ. ಹಾಗಾಗಿ ರಾಜ್ಯದ ಸಿಎಂ ಹಾಗೂ ಸಂಸದರು ಮಹಾರಾಷ್ಟ್ರಕ್ಕೆ ತಕ್ಕ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ಈಗಾಗಲೇ, ನದಿ ಮತ್ತು ಗಡಿ ಆಯೋಗದ ಅಧ್ಯಕ್ಷರು ಮಹಾದಾಯಿ ಹಾಗೂ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಗೆ ವರದಿ ಸಲ್ಲಿಸಿದ್ದಾರೆ. ಹೀಗೆ ಉದ್ಧಟತನ ಮುಂದುವರೆಸಿದರೆ ಕರ್ನಾಟಕದ ಗಡಿಯಾಚೆಗೂ ಒತ್ತುವರಿ ಮಾಡಬೇಕಾಗುತ್ತದೆ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರಿಗೆ ವಿರೇಶ್ ಸೊಬರದಮಠ ಸ್ಪಷ್ಟ ಸಂದೇಶ ರವಾನಿಸಿದರು.
ಇದೇ ಸಂದರ್ಭದಲ್ಲಿ ಮಹಾದಾಯಿ ನಮ್ಮ ತಾಯಿ ಇದ್ದಂತೆ ಎಂಬ ಗೋವಾ ಸಿಎಂ ಪ್ರಮೋದ್ ಸಾವಂತ್ ಅವರ ಹೇಳಿಕೆ ಖಂಡಿಸಿ, ಮಹದಾಯಿ ಕರ್ನಾಟಕದಲ್ಲಿ ಉಗಮವಾಗಿದ್ದು, ಮಹದಾಯಿ ನಮ್ಮ ತಾಯಿ. ಹಾಗಾಗಿ ನಾವೂ ನಮ್ಮ ತಾಯಿ ಮಹದಾಯಿ ಬಿಟ್ಟುಕೊಡುವುದಿಲ್ಲ ಎಂದು ಮಹದಾಯಿ ಹೋರಾಟಗಾರರು ಕಿಡಿಕಾರಿದರು.
ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಕರಣದಲ್ಲಿ ಕರ್ನಾಟಕಕ್ಕೆ ನ್ಯಾಯ ಸಿಕ್ಕಿದೆ.
ಮುಂದಿನ ದಿನಮಾನಗಳಲ್ಲಿ ಡ್ಯಾಂ ಕಟ್ಟಿಸುತ್ತೇವೆ. ಉತ್ತರ ಕರ್ನಾಟಕದ ಭಾಗದ ಬಹುದಿನದ ಬೇಡಿಕೆ ಈಡೇರಿಸಲಿಕ್ಕೆ ಹೋರಾಟ ಮಾಡುತ್ತೇವೆ ಎಂದು ಕರ್ನಾಟಕ ರೈತ ಸೇನಾ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಗೋವಾ ಸಿಎಂಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಅನೇಕ ಹೋರಾಟಗಾರರು ಹಾಗೂ ರೈತರು ಇದ್ದರು.