ವಿಜಯಸಾಕ್ಷಿ ಸುದ್ದಿ, ಗದಗ
ಆತ ಗ್ರಾಮ ಪಂಚಾಯತಿ ಸದಸ್ಯೆಯ ಪತಿ, ಬಿಜೆಪಿ ಮುಖಂಡ. ಹತ್ತಾರು ಹಳ್ಳಿಗಳ ಸಂಘಟಕ ಬೇರೆ. ಸಚಿವರ ಕ್ಷೇತ್ರದ ಪ್ರಭಾವಿ ಅಂದರೆ ಕೇಳಬೇಕೇ? ಗದಗ ತಾಲೂಕಿನ ಹುಯಿಲಗೋಳ ಗ್ರಾಮದ ಗ್ರಾಮ ಪಂಚಾಯತಿಯ ಪಂಪ್ ಮೆಕ್ಯಾನಿಕ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಆಡಳಿತ ಮಂಡಳಿ ಆತನನ್ನು ಸಸ್ಪೆಂಡ್ ಮಾಡಿತ್ತು.
ಮೊದಲೇ ಬಡತನ. ಕೆಲಸವಿಲ್ಲದೆ, ಸಂಬಳ ಬಾರದೆ ಸಂಸಾರ ನೌಕೆ ಸಾಗಿಸಲು ಕಷ್ಟ ಆಗಿದೆ. ಸಸ್ಪೆಂಡ್ ರದ್ದು ಮಾಡಿಸಿ ಕೆಲಸಕ್ಕೆ ತಗೊಳ್ಳಿ ಅಂತ ಕಂಡ ಕಂಡ ಸದಸ್ಯರನ್ನು ಕೇಳಿದರೂ ಒಂದಿಷ್ಟು ದಿನ ಎಲ್ಲರೂ ಸತಾಯಿಸಿದ್ದಾರೆ.
ಗ್ರಾ.ಪಂ. ಅಂಗಳದಲ್ಲೇ ಠಳಾಯಿಸುತ್ತಿದ್ದ ಈ ಮುಖಂಡ ಕಂಡಿದ್ದಾನೆ. ಪಂಪ್ ಮೆಕ್ಯಾನಿಕ್ ಹಾಗೂ ಆತನ ಪತ್ನಿ, ಪಿಡಿಒ ಅವರಿಗೆ ಹೇಳಿ ವಾಪಸ್ ಕೆಲಸಕ್ಕೆ ತಗೋರಿ' ಅಂದಾರ. ಆಗ ಬಿಜೆಪಿ ಲೀಡರ್,
ಆಯಿತು, ನೋಡೋಣ’ ಎಂದು ಹೇಳಿದ್ದಾರೆ. ಅದ್ಯಾಕೋ ಸರಕಾರವೇ ಇವನ ಕೈಯಲ್ಲಿದೆ ಅಂದುಕೊಂಡ ದಂಪತಿ ಈತನ ಹಿಂದೆ ಬಿದ್ದಿದ್ದಾರೆ.
ನಾಳೆ ಹೇಳ್ತೀನಿ… ನಾಡಿದ್ದು ಹೇಳಿ ಮಾಡಿಸ್ತೀನಿ ಅಂತ ಹೇಳುತ್ತಿದ್ದ ಬಿಜೆಪಿ ಮುಖಂಡ ಈ ದಂಪತಿಯ ಅಸಹಾಯಕತೆ ಬಳಸಿಕೊಳ್ಳುವ ಆಲೋಚನೆ ಮಾಡಿದ್ದಾನೆ.
ಆಮೇಲಾ?
ಮಹಿಳೆ ಪೋನ್ ಮಾಡಿ ಕೇಳೋದು…ಇಂವ ಹೇಳ್ತೀನಿ… ಮಾಡ್ತೀನಿ… ಮಾಡಿಸ್ತೀನಿ ಅಂತ ಹೇಳೋದು… ಹೀಗೆ ಒಂದಿಷ್ಟು ದಿನಗಳು ಕಳೆದಿವೆ. ಈ ಮುಖಂಡ ಮನಸ್ಸಿನಲ್ಲಿ ಮಂಡಿಗೆ ಮೆಲ್ಲಲು ಆರಂಭಿಸಿದ್ದ. ಮತ್ತೊಮ್ಮೆ ಕರೆ ಮಾಡಿದ ಮಹಿಳೆಗೆ ನೇರವಾಗಿ ಮಂಚ ಏರಲು ಆಫರ್ ನೀಡಿದ್ದಾನೆ. ಏನ್ರೀ… ಅಂತ ಗಾಬರಿಬಿದ್ದ ಮಹಿಳೆ ಕೊಂಚ ಸುಧಾರಿಸಿಕೊಂಡು, ಕೆಲಸ ಮಾಡಿಸಿಕೊಡಿ, ಆಮೇಲೆ ನೋಡೋಣ' ಅಂದಿದ್ದಾಳೆ.
ಆಮೇಲಾ?’ ಅಂತ ಉದ್ಘಾರ ತಗೆದಿದ್ದಾನೆ ಮಹಾಶಯ.
ಬಿಜೆಪಿ ಭೂಪನ ಬೇಡಿಕೆಯಿಂದ ಮಹಿಳೆಗೆ ಕಸಿವಿಸಿಯಾಗಿದೆ. ಗಂಡನಿಗೆ ಹೇಳಿದಾಗ ಆತನೂ ದಿಗಿಲುಗೊಂಡ. ನಾಲ್ಕು ಮಂದಿ ಮುಂದ ಹೇಳಬೇಕು, ಆತನೊಂದಿಗೆ ಜಗಳ ಮಾಡಬೇಕು ಎಂದರೆ, ಆ ವ್ಯಕ್ತಿ ಪ್ರಭಾವಿ. ಸರಕಾರ, ಪೊಲೀಸರು ಆತನ ತಾಳಕ್ಕೆ ಕುಣಿದರೆ ಏನು ಗತಿ ಎಂದು ಚಿಂತಿಸಿದ ದಂಪತಿಗೆ ದಿಕ್ಕೇ ತೋಚಲಿಲ್ಲ. ಆದರೆ, ಬಿಜೆಪಿ ಮುಖಂಡ ಅಷ್ಟಕ್ಕೆ ಸುಮ್ಮನಾಗದೆ, ಪಂಪ್ ಮೆಕ್ಯಾನಿಕ್‌ಗೂ ಇದನ್ನೇ ಹೇಳಿದ್ದಾನೆ.
ಮುಖಂಡನ ಆಫರ್ ಕುರಿತು ಸಮಾಜದ ಮುಖಂಡರ ಮುಂದೆ ಈ ಪಂಪ್ ಮೆಕ್ಯಾನಿಕ್ ಅಳುಕುತ್ತಲೇ ವಿವರಿಸಿದ್ದಾನೆ. ಮುಂದಾಗಬಹುದಾದ ಅನಾಹುತದ ಕುರಿತು ವಿಚಾರಿಸಿದ ಆತನ ಹಿತೈಷಿಗಳು ಮಂಗಳವಾರ ಗ್ರಾಮೀಣ ಠಾಣೆಗೆ ಆ ಮುಖಂಡನ ವಿರುದ್ಧ ದೂರು ನೀಡಲು ಬಂದಿದ್ದಾರೆ.
ಕೆಲಸ ಮೇಲೆ ಹೊರ ಹೋಗಿದ್ದ ಪಿಎಸ್ಐ:
ಮುಂಜಾನೆ 11 ಗಂಟೆಗೆ ದೂರು ನೀಡಲು ಬಂದವರು ಮಧ್ಯಾಹ್ನ ಎರಡು ಗಂಟೆಯ ವರೆಗೆ ಕಾದ ಮೇಲೆ ಪಿಎಸ್ಐ ಸಾಹೇಬರು ಬಂದಿದ್ದಾರೆ. ಬಿಜೆಪಿ ಮುಖಂಡನ ಪೋನ್ ಸಂಭಾಷಣೆ ಸಮೇತ ಸಾಹೇಬರ ಗಮನಕ್ಕೆ ತಂದು, `ಕಂಪ್ಲೇಂಟ್ ತಗೋರಿ’ ಅಂತ ದಂಪತಿ ಮನವಿ ಮಾಡಿದ್ದಾರೆ.
ದಂಪತಿಯ ಮಾತು ಕೇಳಿದ ಪಿಎಸ್ಐ, ತಮ್ಮ ಮೇಲಧಿಕಾರಿಗೆ ಮಾಹಿತಿ ನೀಡಿದ್ದಾರೆ. ಮೇಲಧಿಕಾರಿ ಮಾಹಿತಿ ಪಡೆದು ಠಾಣೆಗೆ ಬಂದವರೇ ಸಾಕಷ್ಟು ವಿಚಾರಣೆ ನಡೆಸಿದ್ದಾರೆ. ನೀವು ಕಂಪ್ಲೇಂಟ್ ಕೊಟ್ರ ನಿಮಗ ಮುಂದ ತೊಂದರೆ ಆಗುತ್ತ ನೋಡ್ರೀ ಅಂದಾರ. ಆದರೆ, ದಂಪತಿ ಬಗ್ಗಿಲ್ಲ. ಮೊದಲೇ ಸಚಿವರ ಕ್ಷೇತ್ರದ ಮುಖಂಡ. ಈ ರೀತಿ ಪ್ರಕರಣ ದಾಖಲಾದರೆ ನೌಕರಿ ಮಾಡೋದು ಕಷ್ಟ ಎಂದುಕೊಂಡ ಪೊಲೀಸ್ ಅಧಿಕಾರಿ ರಾಜೀ ಪಂಚಾಯತಿ ಮಾಡ್ಕೊರೀ ಅಂತ ದುಂಬಾಲು ಬಿದ್ದಾರೆ. ಸಾಕಷ್ಟು ಹೆದರಿಸಿದ್ದಾರೆ. ಆದರೂ ದಂಪತಿ ಜಗ್ಗಿಲ್ಲ.
ಆರೋಪಿಗೆ ಆತಿಥ್ಯ
ಆಮೇಲೆ ಆರೋಪಿಯಾಗಿರುವ ಬಿಜೆಪಿ ಮುಖಂಡನನ್ನು ಕರೆಸಿ, ಕುರ್ಚಿ ಮೇಲೆ ಕೂರಿಸಿ, ರಾಜಾತಿಥ್ಯ ನೀಡಿದ್ದಾರೆ. ಹೇಗಾದರೂ ಮಾಡಿ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ದೂರು ಪಡೆಯಬಾರದು ಅಂತ ನಿರ್ಧರಿಸಿದ ಪೊಲೀಸರೇ ಮಹಿಳೆಯ ಗೌರವಕ್ಕೆ ಧಕ್ಕೆ ತಂದ ಆರೋಪದ ಮೇಲೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಬರೋಬ್ಬರಿ 11 ಗಂಟೆಗಳು
ಈ ದಂಪತಿ ದೂರು ನೀಡಲು ಠಾಣೆಗೆ ಬಂದಿದ್ದು ಮುಂಜಾನೆ 11 ಗಂಟೆಗೆ. ದೂರು ದಾಖಲಾಗಿದ್ದು ರಾತ್ರಿ 10 ಗಂಟೆಗೆ. ಸತತ 11 ಗಂಟೆ ಕಾಲ ಈ ದಂಪತಿ ಠಾಣೆಯಲ್ಲಿ ಕಾದು ಸುಸ್ತಾಗಿದ್ದಾರೆ, ಮುಜುಗರ ಅನುಭವಿಸಿದ್ದಾರೆ. ಆದರೆ, ಸಾಮಾನ್ಯ ದೂರೊಂದನ್ನು ದಾಖಲಿಸಿ, ಪ್ರಪಂಚ ಗೆದ್ದವರಂತೆ ಪೊಲೀಸರು ಬೀಗಿದ್ದಾರೆ, ಬಿಜೆಪಿ ಮುಖಂಡನೂ ಮೀಸೆ ಮೇಲೆ ಕೈಯಾಡಿಸಿದ್ದಾನೆ.