ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ನೈಸ್ ಕಂಪನಿ ವಿರುದ್ಧ ಮಾಡಿದ್ದ ಆರೋಪ ಸಾಬೀತುಪಡಿಸುವಲ್ಲಿ ವಿಫಲರಾಗಿರುವ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರಿಗೆ ರೂ. 2 ಕೋಟಿ ದಂಡ ವಿಧಿಸಲಾಗಿದೆ. ಮಾಜಿ ಪ್ರಧಾನಿ ದೇವೇಗೌಡ ನೈಸ್ ಕಂಪನಿಗೆ ರೂ. 2 ಕೋಟಿ ಪರಿಹಾರ ನೀಡಬೇಕೆಂದು ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಆದೇಶಿಸಿದೆ.
ಖಾಸಗಿ ವಾಹಿನಿಗೆ ನೀಡಿದ್ದ ಸಂದರ್ಶನವೊಂದರಲ್ಲಿ ದಲ್ಲಿ ದೇವೇಗೌಡರು ಸಂಸ್ಥೆಯ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ನೈಸ್ ಕಂಪನಿಯು ಮಾನನಷ್ಟ ಮೊಕದ್ದಮೆ ಹೂಡಿತ್ತು. ಕಂಪನಿ ವಿರುದ್ಧ ಆರೋಪ ಸಾಬೀತುಪಡಿಸುವಲ್ಲಿ ದೇವೇಗೌಡ ವಿಫಲರಾಗಿದ್ದಾರೆ. ಹೀಗಾಗಿ ಕಂಪನಿಗೆ ರೂ. 2 ಕೋಟಿ ನಷ್ಟ ಪರಿಹಾರ ಕಟ್ಟಿಕೊಡಬೇಕೆಂದು ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಮಲ್ಲನಗೌಡ ತೀರ್ಪು ನೀಡಿದ್ದಾರೆ.
ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ದೇವೇಗೌಡರು, ನೈಸ್ ಕಂಪನಿಯು ಸಾರ್ವಜನಿಕ ಹಣ ಲೂಟಿ ಮಾಡುವ ಯೋಜನೆ ಎಂದು ಆರೋಪಿಸಿದ್ದರು. ‘ಗೌಡರ ಘರ್ಜನೆ’ ಎಂಬ ಶೀರ್ಷಿಕೆಯಡಿ ಈ ಸಂದರ್ಶನ ಬಿತ್ತರವಾಗಿತ್ತು. ಇದರ ವಿರುದ್ಧ ನೈಸ್ ಕಂಪನಿ ಕೋರ್ಟ್ ಮೊರೆ ಹೋಗಿತ್ತು.