ವಿಜಯಸಾಕ್ಷಿ ಸುದ್ದಿ, ಗದಗ:
ಮನೆಯೊಳಗೆ ನುಗ್ಗಿದ ಪುಂಡರ ಗುಂಪೊಂದು ಮನೆಯಲ್ಲಿದ್ದ ಮಹಿಳೆ ಹಾಗೂ ಇತರ ಸದಸ್ಯರ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ಧಗಳಿಂದ ಬೈದು ಮನೆಯಲ್ಲಿದ್ದ ಇಬ್ಬರು ಮಕ್ಕಳನ್ನೂ ಬಲವಂತವಾಗಿ ತಮ್ಮೊಂದಿಗೆ ಎಳೆದೊಯ್ದ ಪ್ರಕರಣ ಭಾನುವಾರ ಗದಗದಲ್ಲಿ ನಡೆದಿದೆ.
ಕಳಸಾಪುರ ರಸ್ತೆಯ ನಂದೀಶ್ವರ ನಗರದ ಸುಕನ್ಯಾ ಜೀವನಕುಮಾರ್ ಪಾರ್ಷಾ ದೂರುದಾರರಾಗಿದ್ದಾರೆ. ಭಾನುವಾರ ಸಂಜೆ 6 ಗಂಟೆಯ ಸುಮಾರಿಗೆ ಚಾಕು ಹಾಗೂ ಇನ್ನಿತರ ಮಾರಕಾಸ್ತ್ರಗಳೊಂದಿಗೆ ಮನೆಗೆ ನುಗ್ಗಿದ ಹುಬ್ಬಳ್ಳಿಯ ಚೇತನ ಕಾಲೋನಿಯ ಜೀವನಕುಮಾರ್ ಪಾರ್ಷಾ ಹಾಗೂ ಇನ್ನಿತರರ ಗುಂಪು, ಸುಕನ್ಯಾ ಅವರಿಗೆ ಹಾಗೂ ಅವರ ಸಂಬಂಧಿಗಳಿಗೆ ಹೊಡೆದು, ಅವಾಚ್ಯ ಶಬ್ಧಗಳಿಂದ ಬೈದು, ಕಾಲಿನಿಂದ ಒದ್ದು, ಹೊಡೆದಿದ್ದಾರೆ.
ಅಷ್ಟೇ ಅಲ್ದೇ`ನಿಮ್ಮನ್ನೆಲ್ಲಾ ಸಾಯಿಸಿಬಿಡ್ತೀನಿ, ನಿನ್ನ ಹಿಂದೆ ಎಷ್ಟೇ ಜನ ಬಂದ್ರೂ ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ, ನಿಮ್ಮ ಸಂಬಂಧಿಕರನ್ನೂ ಸುಮ್ಮನೇ ಬಿಡುವದಿಲ್ಲ, ಪೊಲೀಸ್ ಕಂಪ್ಲೇಂಟ್ ಕೊಡೋದಿದ್ದರೂ ಕೊಡಿ ನೋಡೋಣ’ ಎಂದು ಬೆದರಿಸಿ, ಸುಕನ್ಯಾರ ಮಕ್ಕಳಾದ ಏಳು ವರ್ಷದ ರಿತ್ವಿಕ ಪಾರ್ಷಾ ಹಾಗೂ ಐದು ವರ್ಷದ ರಚಿತಾ ಪಾರ್ಷಾರನ್ನು ಹೆದರಿಸಿ ಬಲವಂತವಾಗಿ ಎತ್ತಿಕೊಂಡು ಹೊರಗಿನಿಂದ ಮನೆಯ ಬಾಗಿಲು ಚಿಲಕ ಹಾಕಿ ಅವರು ಬಂದಿದ್ದ ವಾಹನದಲ್ಲಿ ಹೋಗಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.
ಸದರಿ ಪ್ರಕರಣದ ಬಗ್ಗೆ ಜೀವನಕುಮಾರ್ ಪಾರ್ಷಾ, ಬರ್ನಾಬಸ್ ಪಾರ್ಷಾ, ಪುಲ್ಲಯ್ಯ ಪಾರ್ಷಾ, ಪ್ರೇಮಮ್ಮ ಪಾರ್ಷಾ ಹಾಗೂ ವಿಜಯಕುಮಾರಿ ಗದ್ದಮ್ ಇನ್ನಿತರರ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿರುವದಾಗಿ ತಿಳಿದುಬಂದಿದೆ.