ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರೇಗಲ್ಲ
ಕೊರೋನಾ ವೈರಸ್ ತಡೆಗಟ್ಟಲು ಅನೇಕ ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಂಡಿದ್ದರೂ ಎಲ್ಲವನ್ನೂ ನೋಡಿಕೊಳ್ಳುವುದು ಕಷ್ಟ. ಆದ್ದರಿಂದ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಎಂಬಂತೆ ಪ್ರತಿಯೊಬ್ಬರೂ ಮಾಸ್ಕ್ ಧರಿಸುವ ಮೂಲಕ ಅಂತರ ಕಾಯ್ದುಕೊಂಡು ಕೊರೋನಾ ವೈರಸ್‌ನ್ನು ಹೊಡೆದೋಡಿಸುವುದಕ್ಕೆ ಎಲ್ಲರೂ ಮುಂದಾಗಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನರೇಗಲ್ಲ ಮೇಲ್ವಿಚಾರಕಿ ರೂಪಾ ಎಚ್. ಹೇಳಿದರು.
.
ಪಟ್ಟಣದ ಶ್ರೀ ಮಾರಿಕಾಂಬ ದೇವಸ್ಥಾನದಲ್ಲಿ ಶನಿವಾರ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಾಗೂ ಅಡವಿಸೋಮಪುರ ಕಲಾ ತಂಡದ ಸಂಯುಕ್ತಾಶ್ರಯದಲ್ಲಿ ಕೊರೋನಾ ವೈರಸ್ ಜಾಗೃತಿ ಹಾಗೂ ನೀರು, ಸ್ವಚ್ಛತೆ ಬಗ್ಗೆ ಬೀದಿ ನಾಟಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಬೀದಿ ನಾಟಕದ ಮೂಲಕ ಜನರಿಗೆ ಕೊರೋನಾ ಬಗ್ಗೆ ಜಾಗೃತಿ ಮೂಡಿಸುವುದರೊಂದಿಗೆ ಉತ್ತಮ ಕಾರ್ಯಗಳಿಗೆ ಕೈಜೋಡಿಸುತ್ತಿದೆ. ಈ ವರ್ಷ ಮಹಿಳಾ ಸಬಲಿಕರಣಕ್ಕಾಗಿಯೇ ಇರುವ ನೂರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪಟ್ಟಣದ ಪ್ರತಿಯೊಬ್ಬ ನಾಗರಿಕರು ತಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿ ಇಟ್ಟುಕೊಂಡು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.
ಅಡವಿಸೋಮಪುರ ಕಲಾ ತಂಡದಿಂದ ವೀರಣ್ಣ ಅಂಗಡಿ ಸಂಗಡಿಗರು ಕೊರೋನಾ ವೈರಸ್, ನೀರು, ಸ್ವಚ್ಛತೆ ಬಗ್ಗೆ ನಾಟಕದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನ್ಯಾಯವಾದಿ ಎಂ.ಎನ್. ಹುಲಕೋಟಿ ವಹಿಸಿದ್ದರು. ಎ.ಎ. ನವಲಗುಂದ, ರಜಿಯ ಬಿನ್ನಾಳ, ನೇತ್ರಾ ಎಸ್, ಸುಮಾ, ರೇಣುಕಾ ಧರ್ಮಾಯತ, ಅಶ್ವಿನಿ, ಪುಷ್ಪಾಲಯಾ ಜಕ್ಕಲಿ ಸೇರಿದಂತೆ ಇತರರಿದ್ದರು.
ಮಾಸ್ಕ್, ಸಾಮಾಜಿಕ ಅಂತರದಿಂದ ಕೊರೋನಾ ಹೊಡೆದೋಡಿಸಿ
Advertisement