ವಿಜಯಸಾಕ್ಷಿ ಸುದ್ದಿ, ಬರೈಲಿ
ಮಾಸ್ಕ್ ಧರಿಸದೆ ಬ್ಯಾಂಕ್ ಗೆ ಗ್ರಾಹಕ ಬಂದಿದ್ದಕ್ಕೆ ಅಲ್ಲಿಯ ಭದ್ರತಾ ಸಿಬ್ಬಂದಿಯು ಗ್ರಾಹಕನ ಮೇಲೆ ಗುಂಡು ಹಾರಿಸಿದ ಘಟನೆಯೊಂದು ಉತ್ತರ ಪ್ರದೇಶದ ಬರೈಲಿಯಲ್ಲಿ ನಡೆದಿದೆ. ಮಾಸ್ಕ್ ಧರಿಸದೆ ಹೊರ ಬಂದರೆ ಫೈನ್ ಹಾಕುವುದನ್ನು ನಾವು ನೋಡಿರುತ್ತೇವೆ. ಬೆತ್ತದಿಂದ ಪೊಲೀಸರು ಹೊಡೆಯುವುದನ್ನೂ ನೋಡಿರುತ್ತೇವೆ. ಆದರೆ, ಬರೋಡಾದ ಸ್ಟೇಷನ್ ರಸ್ತೆಯಲ್ಲಿರುವ ಬರೈಲಿ ಬ್ಯಾಂಕ್ ನಲ್ಲಿ ಗುಂಡು ಹಾರಿಸಿರುವ ಘಟನೆ ನಡೆದಿದೆ.
ಘಟನೆಯಲ್ಲಿ ಗ್ರಾಹಕ ರಾಜೇಶ್ ಕುಮಾರ್ ಕಾಲಿಗೆ ಗುಂಡು ತಾಗಿ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ರಾಜೇಶ್ ಕುಮಾರ್, ಶುಕ್ರವಾರ ತಮ್ಮ ಖಾತೆಯಿಂದ ಹಣ ಪಡೆಯಲು ಬ್ಯಾಂಕ್ ಗೆ ತೆರಳಿದ್ದರು. ಅವರು ಮಾಸ್ಕ್ ಧರಿಸದೇ ಹೋಗಿದ್ದರಿಂದ ಅಲ್ಲಿನ ಬ್ಯಾಂಕ್ ಭದ್ರತಾ ಸಿಬ್ಬಂದಿಯಾದ ಕೇಶವ್ ಅವರು ರಾಜೇಶ್ ಅವರನ್ನು ತಡೆದಿದ್ದಾರೆ. ಆಗ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಇದ್ದಕ್ಕಿದ್ದಂತೆ ಭದ್ರತಾ ಸಿಬ್ಬಂದಿ ಕೇಶವ್ ಗ್ರಾಹಕ ರಾಜೇಶ್ ಕುಮಾರ್ ಮೇಲೆ ಗುಂಡು ಹಾರಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡಿರುವ ರಾಜೇಶ್ ನನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಪೊಲೀಸರು ಬ್ಯಾಂಕ್ ಗೆ ಬಂದು ಕೇಶವ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.