-ಬಸವರಾಜ ಕರುಗಲ್.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ,
ಕೊಪ್ಪಳ: ಕೊರೋನಾ ಹಾವಳಿ ಜಿಲ್ಲೆಯಲ್ಲಿ ವಿಪರೀತವಾಗಿದೆ. ರಾಜ್ಯದಲ್ಲಿಯೇ ಗ್ರೀನ್ ಜೋನ್ ಆಗಿದ್ದ ಕೊಪ್ಪಳ ಜಿಲ್ಲೆ ಇದೀಗ ರಾಜ್ಯದ ಪ್ರಮುಖ ಕೊರೋನಾ ಹಾಟ್ ಸ್ಪಾಟ್ ಜಿಲ್ಲೆಯಾಗಿ ಪರಿವರ್ತನೆ ಹೊಂದಿದೆ. ಹಾಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾದ ಕಟ್ಟುಪಾಡು ಜಿಲ್ಲಾಡಳಿತದ ಹೆಗಲೇರಿದೆ. ಹಾಗೆಂದ ಮಾತ್ರಕ್ಕೆ ಮನಸೋ ಇಚ್ಛೆ ಕ್ರಮ ಅಮಾನವೀಯ. ಇಂಥ ಕ್ರಮಕ್ಕೆ ಇಲ್ಲಿದೆ ನೋಡಿ ತಾಜಾ ಉದಾಹರಣೆ.
ಇತ್ತೀಚೆಗೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಅವರ ಆದೇಶ ಹಾಗೂ ಸೂಚನೆಗೆ ಮಾಸ್ಕ್ ಹಾಕಿಕೊಳ್ಳದ ಸಾರ್ವಜನಿಕರಿಗೆ ಪೊಲೀಸರು ದಂಡ ಹಾಕುತ್ತಿದ್ದಾರೆ. ವಿಪರ್ಯಾಸವೆಂದರೆ ಹೊಟೇಲ್‌ನಲ್ಲಿ ಟಿಫಿನ್, ಊಟ ಮಾಡುತ್ತಿರುವ ಗ್ರಾಹಕರಿಗೆ ಡಿಸಿ ಸೂಚನೆ ಮೇರೆಗೆ ಪೊಲೀಸರು ದಂಡ ಹಾಕಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಹೌದು… ಕೊಪ್ಪಳ ಜಿಲ್ಲೆಯ ಗಂಗಾವತಿ ನಗರಕ್ಕೆ ಶನಿವಾರ ಜಿಲ್ಲಾಧಿಕಾರಿ ವಿಕಾಸ ಕಿಶೋರ್ ದಿಢೀರ್ ಭೇಟಿ ನೀಡಿದರು. ಇದೇ ವೇಳೆ ಸ್ವತಃ ಅವರೇ ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಮಾಸ್ಕ್ ಧರಿಸದೇ ಓಡಾಡುತ್ತಿದ್ದ ಜನರಿಗೆ ದಂಡ ಹಾಕುವಂತೆ ಟ್ರಾಫಿಕ್ ಪೊಲೀಸರಿಗೆ ಸೂಚಿಸಿದರು.
ಇನ್ನು ಕೆಲವೊಂದು ಹೊಟೇಲ್ ಒಳಗೂ ಮಾಸ್ಕ್ ಧರಿಸದೇ ಕುಳಿತಿದ್ದ ಜನರಿಗೆ ದಂಡ ಹಾಕುವಂತೆ ಸೂಚನೆ ನೀಡಿದರು. ಇದರಿಂದ ಅನಿವಾರ್ಯವಾಗಿಯೇ ಪೊಲೀಸರು ಹೊಟೇಲ್ ಗ್ರಾಹಕರಿಗೆ ದಂಡ ಹಾಕಿದರು. ಇದರಿಂದಾಗಿ ಅದೇಷ್ಟೋ ಗ್ರಾಹಕರು ಜಿಲ್ಲಾಡಳಿತ ಮತ್ತು ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಮಾಸ್ಕ್ ಧರಿಸಿ ಟಿಫಿನ್ ಮತ್ತು ಊಟ ಹೇಗೆ ಮಾಡಬೇಕು ಅನ್ನೋದು ಕನಿಷ್ಟ ಜ್ಞಾನ ಜಿಲ್ಲಾಡಳಿತಕ್ಕೆ ಇಲ್ವಾ? ಹೊಟೇಲ್‌ಗೆ ಬರೋರು ತಿಂಡಿ ತಿನ್ನೋಕೊ? ಊಟ ಮಾಡೋಕೋ? ಅಥವಾ ಚಹಾ-ಕಾಫಿ ಕುಡಿಯೊಕೊ ಬರ್ತಾರೆ ಎನ್ನುವ ಸಾಮಾನ್ಯ ತಿಳುವಳಿಕೆಯೂ ಜಿಲ್ಲಾಡಳಿತಕ್ಕೆ ಇಲ್ಲವೇ? ಎಂದು ಪ್ರಶ್ನೆ ಮಾಡಿದರು.
ಕೊರೋನಾ ತಡೆಗಟ್ಟುವ ನೆಪದಲ್ಲಿ ಕಂಡ ಕಂಡವರಿಗೆ ಜಿಲ್ಲಾಡಳಿತ ದಂಡ ಹಾಕಿ, ಸಾಮಾನ್ಯ ಜನರ ಬಳಿ ಹಣ ಪಡೆದು ನಮ್ಮ ರಕ್ತ ಹೀರುತ್ತಿದೆ. ಪೊಲೀಸರಿಗೆ, ಸ್ಥಳೀಯ ಸಂಸ್ಥೆಗಳ ಅಧಿಕಾರಿ, ಸಿಬ್ಬಂದಿಗೆ ದಂಡದ ಹೆಸರಿನಲ್ಲಿ ಇದೊಂದು ದೊಡ್ಡ ಹಬ್ಬವಾಗಿದೆ.
-ರಮೇಶ, ಹೊಟೇಲ್ ಗ್ರಾಹಕ.
ಅರೇ, ಊಟ ಮಾಡೋರಿಗೆ, ತಿಂಡಿ ತಿನ್ನೋರಿಗೆ ದಂಡ ಹಾಕ್ತಾರೆ ಅಂದ್ರೆ ಹೇಂಗೆ? ವಿಷಯ ಅದಲ್ಲ. ನಾವು ಆ ರೀತಿ ಮಾಡಿಲ್ಲ. ಹೋಟೇಲ್ ಸೇರಿದಂತೆ ಜನನಿಬಿಡ ಸ್ಥಳಗಳಲ್ಲಿ ಮಾಸ್ಕ್ ಇಲ್ಲದೇ ಗಂಟೆಗಟ್ಟಲೇ ಹರಟೆ ಹೊಡೆಯುತ್ತಿರುವವರನ್ನು ವಾಚ್ ಮಾಡಿ ಅಂಥವರಿಗೆ ದಂಡ ಹಾಕಿದ್ದೇವೆ. ನಾನೇ ಅಂಥವರನ್ನು ಗುರುತಿಸಿ ದಂಡ ಹಾಕಲು ಸೂಚಿಸಿದ್ದೇನೆ. ಊಟ ಮಾಡೋರಿಗೂ ದಂಡ ಹಾಕ್ತಾರೆ ಅನ್ನೋದು ನ್ಯೂಸ್ ಅಲ್ಲ.
-ವಿಕಾಸ್ ಕಿಶೋರ್ ಸುರಳ್ಕರ್, ಜಿಲ್ಲಾಧಿಕಾರಿ, ಕೊಪ್ಪಳ.