ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಇಲ್ಲಿವರೆಗೆ ಯಾರ ಭಯವೂ ಇಲ್ಲದೇ ಮುಂಜ್‌ಮುಂಜಾನೆಯೇ ಜನನಿಬಿಡ ಪ್ರದೇಶದಲ್ಲಿ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುವ ದಂಧೆ ಮಾಡುತ್ತಿದ್ದ ವ್ಯಕ್ತಿಯನ್ನು ಬೆಟಗೇರಿ ಪೊಲೀಸರು ಬರೋಬ್ಬರಿ ಲಾಕ್ ಮಾಡಿದ್ದಾರೆ.
ನಗರದ ಬೆಟಗೇರಿಯ ಬಸ್‌ಸ್ಟ್ಯಾಂಡ್ ಹತ್ತಿರದಲ್ಲೇ ಬಹುವರ್ಷಗಳಿಂದ ಮದ್ಯದ ಅಕ್ರಮ ಮಾರಾಟವನ್ನೇ ದಂಧೆ ಮಾಡಿಕೊಂಡು ಬಂದಿದ್ದ ವೆಂಕಟೇಶ ತುಕರಾಮಸಾ ರಾಯಬಾಗಿ 5,330 ರೂ. ಮೌಲ್ಯದ 110 ಮದ್ಯದ ಟೆಟ್ರಾಪ್ಯಾಕ್‌ಗಳೊಂದಿಗೆ ಬೆಟಗೇರಿಯ ಪೊಲೀಸರ ಕೈಗೆ ಸಿಕ್ಕು ಬಿದ್ದಿದ್ದಾನೆ.
ಪಿಎಸ್‌ಐ ರಾಜೇಶ ಬಟಕುರ್ಕಿ ನೇತೃತ್ವದಲ್ಲಿ ಬೆಟಗೇರಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದು ಬಂಧಿತ ವೆಂಕಟೇಶನನ್ನು ಈಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ದಂಧೆಯಿಂದಾಗಿ ಮುಂಜಾನೆಯೇ ಇಲ್ಲಿ ಮದ್ಯವ್ಯಸನಿಗಳು ನೆರೆಯುತ್ತಿದ್ದುದರಿಂದ ಇಲ್ಲಿನ ಗೃಹಸ್ಥರು ಮತ್ತು ಮಹಿಳೆಯರಿಗೆ ಇದೊಂದು ತಲೆನೋವಾಗಿತ್ತು.
ಈಗ ಅವರೆಲ್ಲ ನಿರಾಳರಾಗಿದ್ದು ಪಿಎಸ್‌ಐ ಬಟಕುರ್ಕಿ ಮತ್ತು ಪೊಲೀಸರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಹಲವರು ಇಂತಹ ಅಕ್ರಮ ದಂಧೆಯಲ್ಲಿ ನಿರತರಾಗಿದ್ದು ಅಂತಹವರಿಗೆ ಪಿಎಸ್‌ಐ ಬಲೆ ಬೀಸಿದ್ದಾರೆ ಎನ್ನಲಾಗಿದೆ.