ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಅಕ್ರಮವಾಗಿ ಭಾರೀ ಪ್ರಮಾಣದ ಸ್ಫೋಟಕ ಸಾಮಗ್ರಿ ಪೂರೈಕೆ ಮಾಡುತ್ತಿದ್ದ ಲಾರಿಯೊಂದನ್ನು ಮುಂಡರಗಿ ಪೊಲೀಸರು ವಶಕ್ಕೆ ಪಡೆದಿದ್ದು, ಇಬ್ಬರನ್ನು ಬಂಧಿಸಿದ್ದಾರೆ.
ಒಟ್ಟು 50 ಕೆಜಿ ತೂಕದ 135 ಚೀಲಗಳಂತೆ ಒಟ್ಟು 6750 ಕೆಜಿ ಅಮೋನಿಯಂ ನೈಟ್ರೇಟ್ ರಾಸಾಯನಿಕವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಲಾರಿ ಚಾಲಕ ಹಾಗೂ ಸ್ಫೋಟಕ ಸಂಗ್ರಹಿಸಿಟ್ಟ ಗೋದಾಮು ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.
ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದ ಬಸವರಾಜ ಅಂಗಡಿ ಅವರಿಗೆ ಸೇರಿದ ಗೋದಾಮಿನಿಂದ ಡಂಬಳ ಗ್ರಾಮದ ಚಾಲಕ ಅಶೋಕ ಕೊಂಪಿಕಲ್, ಸೋಮವಾರ ರಾತ್ರಿ 8.45ರ ಸುಮಾರಿಗೆ ಕಲಕೇರಿ ಮಾರ್ಗವಾಗಿ ಬೀಡನಾಳ ಹೊರಟಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ.
ಪೊಲೀಸ್ ಇನ್ಸ್ಪೆಕ್ಟರ್ ಸುಧೀರಕುಮಾರ್ ಬೆಂಕಿ ನೇತೃತ್ವದಲ್ಲಿ ಈ ಕಾರ್ಯಚರಣೆ ನಡೆದಿದೆ. ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ವನ್ಯಜೀವಿ ಧಾಮಕ್ಕೆ ಕುತ್ತು!
ಕಪ್ಪತಗುಡ್ಡ ಸುತ್ತಮುತ್ತಲಿನಲ್ಲಿ ನೂರಾರು ಜಲ್ಲಿ ಕ್ರಶರ್ ಗಳಿದ್ದು, ಭಾರೀ ಸ್ಫೋಟಕ ಬಳಸಿ ಕಲ್ಲು ಗಣಿಗಾರಿಕೆ ನಡಸಲಾಗುತ್ತದೆ ಎನ್ನುವ ಆರೋಪ ಕೇಳಿಬರುತ್ತಿತ್ತು. ಸೋಮವಾರ ಮುಂಡರಗಿ ಪೊಲೀಸರು ನಡೆಸಿದ ದಾಳಿಯಿಂದ ಅದು ಮತ್ತಷ್ಟು ಖಚಿತವಾಗಿದೆ. ಆ ಮೂಲಕ ಕಪ್ಪತಗುಡ್ಡ ವನ್ಯಜೀವಿ ಧಾಮ ವಲಯ ಅಪಾಯಕ್ಕೆ ಸಿಲುಕಿದಂತಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು.
ಅಕ್ರಮವಾಗಿ ಸ್ಫೋಟಕ ರಾಸಾಯನಿಕ ಸರಬರಾಜು ಮಾಡುತ್ತಿದ್ದ ವ್ಯಕ್ತಿ, ಯಾರಿಗೆ ಸರಬರಾಜು ಆಗುತ್ತಿತ್ತು ಎನ್ನುವ ಮಾಹಿತಿ ಪತ್ತೆ ಮಾಡಿ ಕ್ರಮ ಜರುಗಿಸಬೇಕು ಎಂದು ಪರಿಸರ ಪ್ರಿಯರು ಒತ್ತಾಯಿಸಿದ್ದಾರೆ.