
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಮುಂದಿನ ಚುನಾವಣೆಗೆ ಬೊಮ್ಮಾಯಿಯವರ ನೇತೃತ್ವದಲ್ಲೇ ಬಿಜೆಪಿ ಅಣಿಯಾಗುತ್ತೆ. ಬಿಜೆಪಿಯಿಂದ ಅವರೇ ಮುಂದಿನ ಸಿಎಂ ಅಭ್ಯರ್ಥಿ. ಅದರಲ್ಲಿ ತಪ್ಪೇನಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್ ತಿಳಿಸಿದರು.
ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವದ ನಿಮಿತ್ತ ಧ್ವಜಾರೋಹಣ ನೆರವೇರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬೊಮ್ಮಾಯಿಯವರು ಅತ್ಯುತ್ತಮವಾಗಿ ಆಡಳಿತ ನಡೆಸುತ್ತಿದ್ದಾರೆ. ಸಿಂದಗಿ ಹಾಗೂ ಹಾನಗಲ್ ಉಪಚುನಾವಣೆಯನ್ನು ಅವರ ನೇತೃತ್ವದಲ್ಲೇ ಎದುರಿಸಿದ್ದು ಸಿಂದಗಿಯಲ್ಲಿ ಬಿಜೆಪಿ ಗೆಲ್ಲುವುದು ಶತಸಿದ್ಧ. ಹಾನಗಲ್‌ನಲ್ಲೂ ಬಿಜೆಪಿ ಅಭ್ಯರ್ಥಿ ಪರ ಉತ್ತಮ ಅಭಿಪ್ರಾಯ ಇದೆ ಎಂದರು.
ಬೆಲೆ ಏರಿಕೆ ಕುರಿತು ಡಿಕೆಶಿ ಸೇರಿದಂತೆ ಪ್ರತಿಪಕ್ಷಗಳ ಮುಖಂಡರ ಆರೋಪ ಕುರಿತಾಗಿ ಮಾತನಾಡಿದ ಅವರು ಡಿಕೆಶಿ ಮತ್ತು ಪ್ರತಿಪಕ್ಷಗಳ ಮುಖಂಡರು ಮೊದಲಿನಿಂದಲೂ ಬಿಜೆಪಿ ಬಗ್ಗೆ ಭ್ರಮೆ ಹೊಂದಿದ್ದಾರೆ. ರಾಜ್ಯದ ಮತದಾರರು ಬುದ್ಧಿವಂತರಿದ್ದಾರೆ. ಅವರೇ ತಕ್ಕ ಉತ್ತರ ನೀಡುತ್ತಾರೆ ಎಂದು ಪ್ರತಿಕ್ರಿಯೆ ನೀಡಿದರು.
ಪೆಟ್ರೋಲ್, ಡೀಸೆಲ್ ಸೇರಿಸಂತೆ ಇತರ ವಸ್ತುಗಳ ಬೆಲೆ ಏರಿಕೆ ಆಗುತ್ತಿರುವುದನ್ನು ಒಪ್ಪಿಕೊಳ್ಳುತ್ತೇವೆ. ಜನಸಾಮಾನ್ಯರಿಗೆ ತೊಂದರೆ ಆಗುತ್ತಿರುವುದಕ್ಕೆ ವಿಷಾದಿಸುತ್ತೇವೆ. ಆದರೆ ಇದನ್ನು ನಮ್ಮ ಸರಕಾರ ಜನರಿಗೆ ಹೊರೆ ಆಗಲಿ ಎಂದು ಮಾಡುತ್ತಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆ ಅನುಸರಿಸಿ ಇಂಥ ತೀರ್ಮಾನಗಳನ್ನು ತೆಗೆದುಕೊಳ್ಳುವ ಅನಿವಾರ್ಯ ಸ್ಥಿತಿ ಬಂದೊದಗಿದೆ. ಶೀಘ್ರವೇ ಎಲ್ಲ ಸರಿ ಹೋಗುವ ನಂಬಿಕೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ನವೆಂಬರ್ 8 ರಿಂದ ಅಂಗನವಾಡಿ ಕೇಂದ್ರಗಳನ್ನು ಆರಂಭಿಸಲು ನಿರ್ಧರಿಸಲಾಗಿದ್ದು ರಾಜ್ಯದೆಲ್ಲೆಡೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ ಎಂದ ಅವರು, ಪುನೀತ್ ಸಾವು ರಾಜ್ಯಕ್ಕೆ ದಿಗ್ಭ್ರಮೆ ಮೂಡಿಸಿದೆ. ಆದರೂ ಆಚರಣೆಗಳನ್ನು ಮುಂದುವರಿಸಿಕೊಂಡು ಹೋಗಲೇಬೇಕಾದ ಅನಿವಾರ್ಯತೆ ಇದೆ. ಕೋವಿಡ್ ಕಾರಣದಿಂದ ಸರಳವಾಗಿ ರಾಜ್ಯೋತ್ಸವ ಆಚರಿಸಲಾಗುತ್ತಿದ್ದು, ಪುನೀತ್ ನೋಡಿಕೊಳ್ಳುತ್ತಿದ್ದ ಅನಾಥಾಶ್ರಮಗಳ ದತ್ತು ತೆಗೆದುಕೊಳ್ಳುವ ಕುರಿತು ಪರಿಪೂರ್ಣ ಮಾಹಿತಿ ಪಡೆದು ನಂತರ ತಿಳಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಸಂಸದ ಕರಡಿ ಸಂಗಣ್ಣ, ಶಾಸಕ ರಾಘವೇಂದ್ರ ಹಿಟ್ನಾಳ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಪಂ ಸಿಇಓ ಬಿ.ಫೌಜಿಯಾ ತರುನ್ನೀಮ್ ಇತರರು ಇದ್ದರು.