
ವಿಜಯಸಾಕ್ಷಿ ಸುದ್ದಿ, ಕೊಪ್ಪಳ:
ಮೂರು ವರ್ಷಗಳಿಂದ ಅಂಜನಾದ್ರಿಯನ್ನ ಮುಜರಾಯಿ ಇಲಾಖೆ ಕಬ್ಜಾ ಮಾಡಿಕೊಂಡಿದೆ. ಕೊರೊನಾ ಸಂದರ್ಭದಲ್ಲಿ ಬೀಗ ಹಾಕುತ್ತಾ, ಪೂಜೆ-ಪುನಸ್ಕಾರ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳಿಗೂ ವಿರಾಮ ನೀಡಲಾಗಿದೆ ಎಂದು ಶ್ರೀ ರಾಮಸೇನೆಯ ವಿಭಾಗೀಯ ಅಧ್ಯಕ್ಷ ಸಂಜೀವ ಮುರಡಿ ದೂರಿದರು.
ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 40 ವರ್ಷಗಳಿಂದ ಅಂಜನಾದ್ರಿ ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸಿದ ಅರ್ಚಕ ವಿದ್ಯಾದಾಸ್ ಬಾಬಾ ಅವರನ್ನು ಷಡ್ಯಂತ್ರ ಮಾಡಿ ಹೊರ ಹಾಕಲಾಯಿತು. ಈಗ ಬೆಳಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ವಿದ್ಯಾದಾಸ್ ಬಾಬಾ ಅವರು ಅಂಜನಾದ್ರಿ ಪರ್ವತದಲ್ಲಿ ಪೂಜೆ, ಹೋಮ-ಹವನ ನಡೆಸಲು ಕೋರ್ಟ್ ಆದೇಶ ಆಗಿದೆ. ಆದರೂ ಮುಜರಾಯಿ ಇಲಾಖೆ ಹಾಗೂ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದರು.
ಮುಂದಿನ ದಿನಗಳಲ್ಲಿ ಶಬರಿ ಮಲೈ ದೇವಸ್ಥಾನದ ಪ್ರಸಾದದ ಗುತ್ತಿಗೆ ಹಲಾಲ ಕಮಿಟಿಗೆ ನೀಡಲು ಹುನ್ನಾರ ನಡೆದಿದೆ. ಹಿಂದೂಗಳ ದೇವಸ್ಥಾನದ ಪ್ರಸಾದ ವಿತರಣೆಯ ಗುತ್ತಿಗೆ ನೆಪದಲ್ಲಿ ಅನ್ಯ ಧರ್ಮದ ಕಮಿಟಿಗೆ ಕೊಡಲು ಮುಂದಾಗಿರುವುದು ಹಿಂದೂ ಧರ್ಮದ ವಿರುದ್ಧ ನಡೆಸುತ್ತಿರುವ ಸಂಚು ಎಂದು ಅವರು ಶಂಕೆ ವ್ಯಕ್ತಪಡಿಸಿದರು.
ಅಂಜನಾದ್ರಿ ಪರ್ವತದಲ್ಲಿ ಪೂಜೆ, ಅಖಂಡ ರಾಮಾಯಣ ಪಠಣ, ಹನುಮಾನ್ ಚಾಲೀಸಾ ಮತ್ತು ಸಂಸ್ಕೃತ ಪಾಠಶಾಲಾ ನಡೆಸಿಕೊಂಡು ಬಂದಿದ್ದ ವಿದ್ಯಾದಾಸ್ ಬಾಬಾರವರನ್ನು ಹೊರಗಡೆ ಹಾಕಿದ ಮುಜರಾಯಿ ಇಲಾಖೆ ಅಧಿಕಾರಿಗಳು, ಸದ್ಯ ಈ ಎಲ್ಲ ಧಾರ್ಮಿಕ ಕಾರ್ಯಗಳನ್ನು ಸ್ಥಗಿತಗೊಳಿಸಿದ್ದಾರೆ. ಅಧಿಕಾರಿಗಳು ಹಣದ ಸಂಪನ್ಮೂಲ ಎಲ್ಲಿ ಬರುತ್ತದೆಯೋ ಅಲ್ಲಿ ಓಡಿ ಹೋಗುತ್ತಾರೆ. ಬಾಬಾರವರನ್ನು ದೇವಸ್ಥಾನದಿಂದ ಹೊರ ಹಾಕುವಾಗ ಅಧಿಕಾರಿಗಳು ದೇವಸ್ಥಾನದ ನಗದು, ಬೆಳ್ಳಿ ಸಲಕರಣೆಗಳನ್ನು ದೋಚಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೋರ್ಟ್ ಆದೇಶದಂತೆ ವಿದ್ಯಾದಾಸ್ ಬಾಬಾ ಅವರನ್ನು ಮರಳಿ ದೇವಸ್ಥಾನದ ಮೂಲ ಅರ್ಚಕರೆಂದು ಮತ್ತು ಅಲ್ಲಿ ನಡೆಯುವ ಕಾರ್ಯಗಳಿಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಿದ ಅವರು, ಇಲ್ಲದಿದ್ದರೆ ಶ್ರೀ ರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅರ್ಚಕ ವಿದ್ಯಾದಾಸ ಬಾಬಾ,
ಮಲ್ಲಾಪುರ ಗ್ರಾಮದ ಜೆ.ಪಿ.ನಾರಾಯಣಗೌಡ್ರ ಮತ್ತಿತರರು ಇದ್ದರು.