ವಿದೇಶಿ ಪಕ್ಷಿಗಳ ಕಲರವ ಕಣ್ತುಂಬಿಕೊಳ್ಳಲು ಪ್ರವಾಸಿಗರ ಭೇಟಿ| ಯಾತ್ರಿಕರಿಗಾಗಿ ಕೆರೆಯ ಆವರಣದಲ್ಲಿ ಮೂಲಸೌಲಭ್ಯ
ದುರಗಪ್ಪ ಹೊಸಮನಿ
ವಿಜಯಸಾಕ್ಷಿ ವಿಶೇಷ, ಲಕ್ಷ್ಮೇಶ್ವರ
ತಾಲೂಕಿನ ಸಂರಕ್ಷಣಾ ಮೀಸಲು ಪ್ರದೇಶವಾಗಿರುವ ಮಾಗಡಿ ಕೆರೆಗೆ ವಿದೇಶಿ ಅತಿಥಿಗಳ ಆಗಮನವಾಗಲು ಶುರುವಾಗಿದೆ. ಪರದೇಶದಿಂದ ವಿವಿಧ ಜಾತಿಯ ಪಕ್ಷಿಗಳು ಬಲಾರಂಭಿಸಿದ್ದು, ನಾಲ್ಕೈದು ತಿಂಗಳವರೆಗೆ ಪಕ್ಷಿ ಪ್ರೇಮಿಗಳ ಕಣ್ಣು ತಣಿಸಲಿವೆ.
ಪ್ರತಿ ವರ್ಷ ಚಳಿಗಾಲ ಪ್ರಾರಂಭದ ನವೆಂಬರ್ ತಿಂಗಳ ಮೊದಲ ವಾರದಿಂದ ಸಾವಿರಾರು ಕಿ.ಮೀ. ಸಂಚರಿಸಿ ಮಾಗಡಿ ಕೆರೆಗೆ ವಲಸೆ ಬರುವ ವಿದೇಶಿ ಪಕ್ಷಿಗಳು ಮಾರ್ಚ್‌ವರೆಗೂ ಕೆರೆಯಲ್ಲಿಯೇ ಬೀಡು ಬಿಟ್ಟಿರುತ್ತವೆ. ನವೆಂಬರ್ ಆರಂಭದಿಂದ ಮಾರ್ಚ್ ಅಂತ್ಯದವರೆಗೆ ಲಕ್ಷಾಂತರ ವಿದೇಶಿ ಪಕ್ಷಿಗಳು ಲಗ್ಗೆಯಿಡುತ್ತವೆ. ಸುಮಾರು ೧೩೪ ಎಕರೆ ವೀಸ್ತಿರ್ಣವಿರುವ ಕೆರೆಯಲ್ಲಿ ವಾಸ್ತವ್ಯ ಮಾಡಲಿದ್ದು, ಜಿಲ್ಲೆಯ ಮಾಗಡಿ ಕೆರೆ ವಲಸೆ ಪಕ್ಷಿಗಳ ‘ಹಾರ್ಟ್ ಫೆವರೀಟ್’ ವಾಸಸ್ಥಳವಾಗಿ ಮಾರ್ಪಟ್ಟಿದೆ.
ಈಗಾಗಲೇ ಮಂಗೋಲಿಯಾದ ಬಾರ್ ಹೆಡ್ಡೆಡ್ ಗೂಜ್ ಹಾಗೂ ಕಾಶ್ಮೀರದ ಬ್ರಾಹ್ಮಿಣಿ ಡಕ್ ಕೆರೆಯಲ್ಲಿ ಬೀಡು ಬಿಟ್ಟಿದೆ. ಅದರಂತೆ, ನಾರ್ಥನ್ ಪಿಂಟೆಲ್, ಕೋಮ್ ಡಕ್, ಡೆಮೋಸಿಲ್ ಕ್ರೇನ್, ಗಾರ್ಗಿನಿ, ನಾರ್ಥನ್ ಸೂವೆಲ್ಲರ್, ಕಾಮನ್ ಪೋಚಾರ್ಡ್ ಸೇರಿ ಎಂಟಕ್ಕೂ ಹೆಚ್ಚು ಜಾತಿಯ ವಿದೇಶಿ ಪಕ್ಷಿಗಳು, ಅದರಂತೆ, ಪೆಂಟೆಡ್ ಸ್ಟಾರ್ಕ್, ಗ್ರೇ ಹೆರಾನ್, ಫರ್‌ಫಲ್ ಮೂರ್ ಹೆನ್ನ, ಕಾಮನ್ ಕೂಟ್, ಸ್ಪಾಟ್ ಬಿಲ್ಲಿಡ್ ಡಕ್, ಕಾರ್ಮೊರೆಂಟ್, ಡಾಟರ್, ವೈಟ್ ಬ್ರೇಸ್ಟೆಡ್ ವಾಟರ್ ಹೆನ್, ವೈಟ್ ಐಬಿಸ್, ಬ್ಲಾಕ್ ಐಬಿಸ್, ವೈಟ್ ನೆಕ್ಟ ಸ್ಟಾರ್ಕ್ ಜಾತಿಯ ಸ್ವದೇಶಿ ಪಕ್ಷಿಗಳು ಇನ್ನಷ್ಟೇ ಬರಬೇಕಿದೆ. ಅಲ್ಲದೇ, ಇವುಗಳ ಜೊತೆಗೆ ಸ್ವದೇಶದ ರೋಜಿಸ್ಟಾರ್ಲಿಂಗ್ ಪಕ್ಷಿಗಳ ಹಿಂಡು ನೋಡುಗರಿಗೆ ಕಾಣಸಿಗಲಿದೆ.
ಪ್ರತಿವರ್ಷ ಚಳಿಗಾಲ ಆರಂಭವಾಗುತ್ತಿದ್ದಂತೆ ಮಾಗಡಿ ಕೆರೆಗೆ ಮಂಗೋಲಿಯಾ, ಸೈಬಿರಿಯಾ, ಚೀನಾ, ಪಾಕಿಸ್ತಾನ, ಆಸ್ಟ್ರೇಲಿಯಾ, ಕಾಶ್ಮೀರದಿಂದ ಸಾವಿರಾರು ಪಕ್ಷಿಗಳ ಗುಂಪು ವಲಸೆ ಬರಲಿವೆ. ಸ್ವದೇಶಿಯ ೧೨ ಹಾಗೂ ವಿದೇಶಿಯ ೮ ಸೇರಿ ಒಟ್ಟು ೨೦ ವಿವಿಧ ಜಾತಿಯ ಪಕ್ಷಿಗಳು ಆಗಮಿಸುತ್ತವೆ.
ನೀರಿನಲ್ಲಿ ತೇಲುತ್ತಾ ರೆಕ್ಕೆ ಬಡೆಯುತ ವಿಹರಿಸುವ ಪಕ್ಷಿಗಳು ಆಹಾರ ಹುಡುಕಿಕೊಂಡು ರಾತ್ರಿ ಹತ್ತಾರು ಕಿ.ಮೀ. ದೂರ ಹೋಗುತ್ತವೆ. ಮರಳಿ ಮುಂಜಾನೆ ಕೆರೆಗೆ ಧಾವಿಸುವ ಅವುಗಳು ನೀರಿನಲ್ಲಿ ವಿಹರಿಸುತ್ತವೆ. ಇಳಿ ಹೊತ್ತಿನ ಬಾನಂಗಳದಲ್ಲಿ ವಿದೇಶಿ ಅತಿಥಿಗಳ ಸ್ವಚ್ಛಂದ ಹಾರಾಟ ನೋಡುಗರ ಹೃನ್ಮನ ಸೆಳೆಯುತ್ತಿದೆ.

‘ಪ್ರತಿವರ್ಷ ಮಾಗಡಿ ಕೆರೆಗೆ ವಲಸೆ ಬರುವ ವಿದೇಶಿ ಮತ್ತು ಸ್ವದೇಶಿಯ ವಿವಿಧ ಜಾತಿಯ ಪಕ್ಷಿಗಳನ್ನು ವೀಕ್ಷಿಸಲು ಸಾಕಷ್ಟು ಜನ ಬರುತ್ತಿದ್ದಾರೆ. ಈಗಾಗಲೇ ಪಕ್ಷಿಗಳು ಆಗಮಿಸುತ್ತಿದ್ದು, ಶೇ.೧ರಷ್ಟು ಪಕ್ಷಿಗಳು ಕೆರೆಯಲ್ಲಿ ಬೀಡುಬಿಟ್ಟಿವೆ. ಇನ್ನೂ
ವಿವಿಧ ಜಾತಿಯ ಸಾವಿರಾರು ಪಕ್ಷಿಗಳು ಬರಬೇಕಿದೆ. ಸೋಮಣ್ಣ, ಪಕ್ಷಿ ಸಂರಕ್ಷಕ
ಇನ್ನು ಕಿತ್ತೂರ ಕರ್ನಾಟಕ ಭಾಗದಲ್ಲಿ ಮಾಗಡಿ ಕೆರೆ ವಲಸೆ ಪಕ್ಷಿಗಳ ಪ್ರಸಿದ್ಧ ತಾಣವಾಗಿದ್ದು, ಪಕ್ಷಿ ವೀಕ್ಷಣೆಗಾಗಿ ಅನೇಕ ಕಡೆಗಳಿಂದ ಆಗಮಿಸುತ್ತಾರೆ. ಅಲ್ಲದೇ, ಇಲ್ಲಿಗೆ ಬರುವ ಯಾತ್ರಿಕರಿಗಾಗಿ ಅರಣ್ಯ ಇಲಾಖೆ ಕುಡಿಯುವ ನೀರು, ಶೌಚಾಲಯ, ಆಸನದ ವ್ಯವಸ್ಥೆ, ಊಟದ ಹಾಲ್ ಸೇರಿದಂತೆ ಹಲವು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿದೆ.

10 ಸಾವಿರಕ್ಕೂ ಅಧಿಕ ಪಕ್ಷಿಗಳು ವಲಸೆ!
ಪ್ರತಿ ಚಳಿಗಾಲದಲ್ಲಿ ಮಾಗಡಿ ಕೆರೆಗೆ ಬಾರ್ ಹೆಡ್ಡೆಡ್ ಗೂಜ್ ಜಾತಿಯ ಪಕ್ಷಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಸುಮಾರು 10,000ಕ್ಕೂ ಅಧಿಕ ಪಕ್ಷಿಗಳು ಮಂಗೋಲಿಯಾದಿಂದ ವಲಸೆ ಬರುತ್ತವೆ. ಈಗಾಗಲೇ ನಾಲ್ಕು ಸಾವಿರಕ್ಕೂ ಅಧಿಕ ಮಂಗೋಲಿಯಾದ ಬಾರ್ ಹೆಡ್ಡೆಡ್ ಗೂಜ್ ಪಕ್ಷಿಗಳು ಕೆರೆಯಲ್ಲಿ ಬೀಡುಬಿಟ್ಟಿದ್ದು, ಇನ್ನು 6,000ಕ್ಕೂ ಹೆಚ್ಚು ಪಕ್ಷಿಗಳು ಇನ್ನಷ್ಟೇ ಬರಬೇಕಿದೆ.
- ಸೋಮಣ್ಣ, ಪಕ್ಷಿ ಸಂರಕ್ಷಕ