ಸಾರಿಗೆ ಸಂಸ್ಥೆಯ ನೌಕರರ ಮುಷ್ಕರ: ನಾಳೆ ಬಸ್ ಬಂದ್
ವಿಜಯಸಾಕ್ಷಿ ಸುದ್ದಿ, ಗದಗ
ರಾಜ್ಯ ಸಾರಿಗೆ ಸಿಬ್ಬಂದಿಗಳು ಆರನೇ ವೇತನ ಆಯೋಗ ಜಾರಿಗೊಳಿಸುವಂತೆ ಬುಧವಾರ ದಿಂದ ನಾಲ್ಕು ಸಾರಿಗೆ ಸಂಸ್ಥೆಗಳ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಹಿನ್ನೆಲೆಯಲ್ಲಿ, ಮುಷ್ಕರದ ಮುನ್ನಾ ದಿನವೇ ಶೇ.50ರಷ್ಟು ಬಸ್‌ಗಳು ಸಂಚರಿಸದೇ ಪ್ರಯಾಣಿಕರು, ವಿದ್ಯಾರ್ಥಿಗಳು ಬಸ್‌ಗಾಗಿ ಪರದಾಟ ನಡೆಸಿದರು.
ಮಂಗಳವಾರದಂದು ಎರಡನೇಯ ಪಾಳೆಯ ಸಾರಿಗೆ ಸಂಸ್ಥೆಯ ಚಾಲಕರು, ನಿರ್ವಾಹಕರು ಕರ್ತವ್ಯಕ್ಕೆ ಗೈರಾಗಿದ್ದರಿಂದ ಬಸ್‌ಗಳು ಡಿಪೋ ಬಿಟ್ಟು ಹೊರಗಡೆ ಬರಲಿಲ್ಲ. ಇದರಿಂದ ಗದಗನ ಪಂಡಿತ ಪುಟ್ಟರಾಜ ಗವಾಯಿಗಳ ಬಸ್ ನಿಲ್ದಾಣದಲ್ಲಿ ಊರಿಗೆ ಹೋಗಲು ಬಸ್‌ಗಳಿಲ್ಲದೇ ಸಾರ್ವಜನಿಕರು ಪರದಾಡಿದರು.
ಈ ವೇಳೆ ನಿಯಂತ್ರಾಣಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಯಾಣಿಕರು, ಗ್ರಾಮೀಣ ಭಾಗಕ್ಕೆ ಬಸ್‌ಗಳನ್ನು ಬಿಡುವಂತೆ ಒತ್ತಾಯಿಸಿದರು. ಇನ್ನು ‘ಮಧ್ಯಾಹ್ನದಿಂದ ಬರಬೇಕಾಗಿದ್ದ ಬಸ್ ಬಂದಿಲ್ಲವೆಂದು ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಕೆಲವು ಸಿಬ್ಬಂದಿಗಳು ಮಂಗಳವಾರ ಮಧ್ಯಾಹ್ನದಿಂದಲೇ ಕರ್ತವ್ಯಕ್ಕೆ ಹಾಜರಾಗದೇ ಸರ್ಕಾರದ ವಿರುದ್ಧ ಸಮರ ಸಾರಿದ ಪರಿಣಾಮ, ಜಿಲ್ಲೆಯಲ್ಲಿ ಮಧ್ಯಾಹ್ನದಿಂದ ಬೆರಳೆಣಕೆಯಷ್ಟು ಬಸ್‌ಗಳು ಮಾತ್ರ ರಸ್ತೆಗಿಳಿದ್ದವು. ಇದರಿಂದ ಸಾರ್ವಜನಿಕರು ತುಂಬಾ ಸಮಸ್ಯೆಗಳನ್ನು ಅನುಭವಿಸಿದರು. ಹೀಗಾಗಿ ಕರ್ತವ್ಯಕ್ಕೆ ಗೈರಾದ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳನ್ನು ಅಧಿಕಾರಿಗಳು ಫೋನ್ ಕರೆ ಮಾಡುವ ಮೂಲಕ ಕರ್ತವ್ಯಕ್ಕೆ ಕರೆಯಿಸಿಕೊಳ್ಳಲು ಪ್ರಯತ್ನಿಸಿದರೂ ಫಲಪ್ರದವಾಗಲಿಲ್ಲ.
ಬಸ್ ಬಂದಾದ್ರೆ 50 ಲಕ್ಷ ರೂ. ನಷ್ಟ
ಜಿಲ್ಲೆಯಲ್ಲಿ ಒಟ್ಟು 2,700 ಜನ ಸಿಬ್ಬಂದಿಗಳು ಕರ್ತವ್ಯ ನಿರ್ವಹಸುತ್ತಿದ್ದು, ಒಟ್ಟು 542 ಬಸ್‌ಗಳಿವೆ. ಒಂದು ವೇಳೆ ಬಸ್ ಬಂದ್ ಆದಲ್ಲಿ, ಒಂದು ದಿನಕ್ಕೆ ಸುಮಾರು 50 ಲಕ್ಷ ರೂ. ನಷ್ಟವಾಗುತ್ತದೆ ಎಂದು ಗದಗ ಕೆಎಸ್‌ಆರ್‌ಟಿಸಿ ಡಿಸಿ ಎಫ್.ಸಿ.ಹಿರೇಮಠ ಅವರು ‘ವಿಜಯಸಾಕ್ಷಿ,ಗೆ ತಿಳಿಸಿದರು.
ಬಸ್ ಓಡಿಸುವಂತೆ ಸಾರಿಗೆ ನೌಕರರಿಗೆ ಹೇಳಿದ್ದೇವೆ. ಬಸ್ ಓಡಿಸಲು ಶತಪ್ರಯತ್ನ ನಡೆಸುತ್ತಿದ್ದು, ಈಗಾಗಲೇ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಒಂದು ವೇಳೆ ನೌಕರರು ಕರ್ತವ್ಯಕ್ಕೆ ಹಾಜರಾಗದಿದ್ದರೆ, ಸೂಕ್ತ ಕ್ರಮಕೈಗೊಳ್ಳಲಾಗುವುದು.
ಎಫ್ ಸಿ ಹಿರೇಮಠ, ಕೆಎಸ್ಆರ್ಟಿಸಿ ಡಿಸಿ ಗದಗ
ಸಾರಿಗೆ ಸಂಸ್ಥೆಯ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಬುಧವಾರ ಕರ್ತವ್ಯಕ್ಕೆ ಹಾಜರಾಗಬೇಕಿದ್ದ ಚಾಲಕರು, ನಿರ್ವಾಹಕರು ಗೈರು ಹಾಜರಾಗಿದ್ದರಿಂದ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಹೀಗಾಗಿ ಸರ್ಕಾರ ಶೀಘ್ರವೇ ಸಾರಿಗೆ ಸಂಸ್ಥೆಯ ನೌಕರರ ಬೇಡಿಕೆಯನ್ನು ಈಡೇರಿಸುವ ಮೂಲಕ ಸಮಸ್ಯೆಗಳನ್ನು ಬಗೆಹರಿಸಬೇಕು. ಈ ಮೂಲಕ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು.
ಬಸವರಾಜ್ ಸಾಬಳೆ, ಪ್ರಯಾಣಿಕರು
ಸಾರಿಗೆ ಸಂಸ್ಥೆಯ ನೌಕರರು ನಡೆಸುತ್ತಿರುವ ಮುಷ್ಕರದ ಮುಂದಾಳತ್ವವನ್ನು ಯಾವುದೇ ಸಂಘಟನೆಗಳು ವಹಿಸಿಲ್ಲ. ಕಾರ್ಮಿಕರು ಸ್ವಯಂ ಪ್ರೇರಿತರಾಗಿ ಬಸ್ ಬಂದ್ ಮಾಡಿ ಮುಷ್ಕರ ನಡೆಸುತ್ತಿದ್ದಾರೆ. ಹೀಗಾಗಿ ಬಸ್‌ಗಳು ರಸ್ತೆಗೆ ಇಳಿಯುವುದಿಲ್ಲ. ಅಲ್ಲದೇ, ಸರ್ಕಾರ ಕೇವಲ ಶೇ.೮ರಷ್ಟು ವೇತನ ಹೆಚ್ಚಳ ಮಾಡುತ್ತೇನೆಂದು ಹೇಳುವುದು ಸರಿಯಲ್ಲ. ಸರ್ಕಾರಿ ನೌಕರರಿಗೆ ಸಿಗುವ ಸೌಲಭ್ಯಗಳು ಸಾರಿಗೆ ಸಂಸ್ಥೆಯ ಸಿಬ್ಬಂದಿಗಳಿಗೂ ಸಿಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು.
ಎಸ್.ಕೆ.ಅಯ್ಯನಗೌಡ್ರ, ಕೆಎಸ್‌ಆರ್‌ಟಿಸಿ ನೌಕರರ ಮುಖಂಡ