ವಿಜಯಸಾಕ್ಷಿ ಸುದ್ದಿ, ಗದಗ
ಮನೆ ಬಿಲ್ ಕ್ಲಿಯರ್ ಮಾಡಿಸಿ ಅಂತ ಸಮಸ್ಯೆ ಹೇಳಿಕೊಂಡು ಕರೆ ಮಾಡಿದ್ದ ಗ್ರಾಮ ಪಂಚಾಯತಿ ಸದಸ್ಯರೊಬ್ಬರಿಗೆ ವಸತಿ ಸಚಿವರು ನೀನೇನು ದೇವರಾ ಎಂದು ಅವಾಜ್ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.

ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದಲ್ಲಿ 2016 ರಿಂದ ಸುಮಾರು 100 ಕ್ಕೂ ಹೆಚ್ಚು ವಸತಿ ಯೋಜನೆಗಳ ಬಿಲ್ ಕ್ಲೀಯರ್ ಆಗದ ಹಿನ್ನೆಲೆ ಗ್ರಾಮ ಪಂಚಾಯತಿ ಸದಸ್ಯ ಮೊಹಮ್ಮದ್ ರಫೀಕ್ ಕರ್ನಾಚಿ, ಸಚಿವರಿಗೆ ಫೋನ್ ಕರೆ ಮಾಡಿದ್ದರು. ಕರ್ನಾಚಿಗೆ ಏಕವಚನದಲ್ಲೇ ವಸತಿ ಸಚಿವ ವಿ. ಸೋಮಣ್ಣ ಗದರಿದ್ದಾರೆ.
ಇದಕ್ಕೆ ಸದಸ್ಯ, ನಾನೊಬ್ಬ ಗ್ರಾಮ ಪಂಚಾಯತಿ ಸದಸ್ಯ. ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುವುದು ಮತ್ತು ಬಗೆಹರಿಸುವುದು ನನ್ನ ಜವಾಬ್ದಾರಿ ಸರ್ ಎಂದು ಮರು ಉತ್ತರ ನೀಡಿದ್ದಾರೆ.
ಗ್ರಾಮ ಪಂಚಾಯ್ತಿ ಮೇಂಬರ್ ಆದ್ರೆ ನೀನೇನು ದೇವರಾ ? ಏನು ಸಮಸ್ಯೆ ಬರೆದು ಕಳುಹಿಸು ದಡ್ಡ ಎಂದು ಸಚಿವರು ಆವಾಜ್ ಹಾಕಿ ಕರೆ ಕಟ್ ಮಾಡಿದ್ದಾರೆ.
ಸಚಿವರ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.