ವಿಜಯಸಾಕ್ಷಿ ಸುದ್ದಿ, ಗದಗ
ಮೇಕೆದಾಟು ಯೋಜನೆ ವಿಚಾರದಲ್ಲಿ ರಾಜ್ಯದ ಹಿತಾಶಕ್ತಿಗೆ ವಿರುದ್ಧವಾಗಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾಡಿದ ಟ್ವೀಟ್ ಸತ್ಯವಾಗಿದ್ದರೆ ತಕ್ಷಣ ಸಿ.ಟಿ.ರವಿ ರಾಜ್ಯದ ಜನತೆಯಲ್ಲಿ ಕ್ಷಮೆ ಯಾಚಿಸಬೇಕು ಹಾಗೂ ತಮ್ಮ ನಿಲುವು ಬದಲಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಎಚ್.ಕೆ.ಪಾಟೀಲ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಿಳುನಾಡಿನ ಮಾಜಿ ಐಪಿಎಸ್ ಅಧಿಕಾರಿಯೊಬ್ಬರು ತೆಗೆದುಕೊಂಡ ನಿಲುವು ಮತ್ತು ಹೋರಾಟ ಬೆಂಬಲಿಸಿ ಸಿ.ಟಿ.ರವಿ ಅವರು ಟ್ವೀಟ್ ಮಾಡಿದ್ದಾರೆ. ಸಿ.ಟಿ.ರವಿ ಅವರ ನಿಲುವು ಆಶ್ಚರ್ಯ ಮತ್ತು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.
ಮೇಕೆದಾಟು ಯೋಜನೆ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳು ಸರಿಯಾದ ನಿಲುವು ತೆಗೆದುಕೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತೆಗೆದುಕೊಂಡ ನಿಲುವಿನ ಬಗ್ಗೆ ಮುಖ್ಯಮಂತ್ರಿಗಳೂ ಗಟ್ಟಿ ಧ್ವನಿಯಲ್ಲೇ ಮಾತನಾಡಿದ್ದಾರೆ. ರಾಜ್ಯದ ನಿಲುವು ಒಂದೇ ಆಗಿದ್ದಾರೂ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಟ್ವೀಟ್ ಗೊಂದಲ ಸೃಷ್ಟಿಸುತ್ತಿದೆ ಎಂದು ಆರೋಪಿಸಿದ ಅವರು, ಬಿಜೆಪಿ ಮತ್ತು ಸರಕಾರದ ನಿಲುವಿನಲ್ಲಿ ವ್ಯಾತ್ಯಾಸವಿದೆ. ಈ ಬಗ್ಗೆ ಸರಕಾರ ಮತ್ತು ಪಕ್ಷ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಕೊರೊನಾ ನಿರ್ವಹಣೆ ಕುರಿತು ಗಮನಹರಿಸಿ, ಶ್ರದ್ಧೆಯಿಂದ ಕೆಲಸಮಾಡುವುದು ಇಂದಿನ ತುರ್ತು ಅಗತ್ಯವಾಗಿದೆ. ಆದರೆ, ಸರ್ಕಾರದಲ್ಲಿ ಸಚಿವ ಸ್ಥಾನಕ್ಕೆ ಕಿತ್ತಾಟ ನಡೆದಿದೆ. ಸಚಿವ ಆನಂದ ಸಿಂಗ್, ಎಂಟಿಬಿ ನಾಗರಾಜ ಅವರು ಖಾತೆ ಬದಲಾವಣೆಗಾಗಿ ಮುಖ್ಯಮಂತ್ರಿಗಳಿಗೆ ಗಡುವು ನೀಡಿದರೆ, ಸುಮಾರು ಐವರು ಶಾಸಕರು ಸಚಿವ ಸ್ಥಾನಕ್ಕಾಗಿ ಮುಖ್ಯಮಂತ್ರಿಗಳಿಗೆ ಬೆದರಿಕೆ ಹಾಕಿದ್ದಾರೆ. ಅದನ್ನು ಶಮನಗೊಳಿಸಲು ಸಿಎಂ ಬಸವರಾಜ ಬೊಮ್ಮಾಯಿ ಮತ್ತೆ ದೆಹಲಿಗೆ ತೆರಳುವುದಾಗಿ ಹೇಳುತ್ತಿದ್ದಾರೆ.
ಆದರೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೊರೊನಾ ಮೂರನೇ ಅಲೆ ತೀವ್ರವಾಗುತ್ತಿದೆ. ಇಂತಹ
ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜಕೀಯ ಅಟಾಟೋಪಗಳಿಗೆ ಅವಕಾಶ ನೀಡದೇ, ಎಲ್ಲರೂ ಸೋಂಕು ನಿವಾರಿಸಲು ಪ್ರಯತ್ನಿಸಬೇಕು ಎಂದು ಸರಕಾರಕ್ಕೆ ಸಲಹೆ ನೀಡಿದರು.