- ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಿಎಂ ಬೊಮ್ಮಾಯಿ ವಾಗ್ದಾಳಿ
ವಿಜಯಸಾಕ್ಷಿ ಸುದ್ದಿ, ಹಾವೇರಿ
ಮೈಸೂರನಲ್ಲಿ ಏನೂ ಮಾಡಲು ಸಾಧ್ಯವಾಗದವರು ಹಾನಗಲ್ ಗೆ ಬಂದು ಎನು ಮಾಡ್ತೀರಾ. ಮೈಸೂರು ಜನರೇ ನಿಮ್ಮ ಮೇಲೆ ವಿಶ್ವಾಸ ಇಟ್ಟಿಲ್ಲ. ಹಾನಗಲ್ ಜನ ಯಾಕೆ ವಿಶ್ವಾಸ ಇಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದರು.
ಹಾನಗಲ್ ನಲ್ಲಿ ಉಪಚುನಾವಣೆಯ ಬಹಿರಂಗ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಣ್ಣ ಮಾತು ಎತ್ತಿದ್ರೆ ಮೋದಿಯ ಬಗ್ಗೆ ಮಾತಾಡ್ತಾರೆ. ಮೋದಿಯ ವಿರುದ್ಧ ಮಾತನಾಡಿದ್ರೆ ದೊಡ್ಡ ವ್ಯಕ್ತಿ ಆಗುತ್ತೆನೆಂದುಕೊಂಡಿದ್ದಾರೆ. ಅಚ್ಚೇ ದಿನ್ ಎಲ್ಲಿದೆ ಎಂದು ಪದೇ ಪದೆ ಪ್ರಶ್ನೆ ಮಾಡುತ್ತಾರೆ. ಅಚ್ಚೇ ದಿನ್ ದೇಶದ ಜನರಿಗೆ ಬರುತ್ತಿದೆ. ಸಿದ್ದರಾಮಯ್ಯ ಕಾಂಗ್ರೆಸ್ ನಲ್ಲಿ ಇರುವವರೆಗೂ ಅಚ್ಚೇ ದಿನ್ ಬರಲ್ಲ. ಅವರಿಗೆ ಅಚ್ಚೇ ದಿನ್ ಬರಲು ಡಿಕೆಶಿ ಬಿಡಲ್ಲ ಎಂದು ಕುಟುಕಿದರು.
ಕಾಂಗ್ರೆಸ್ ನಲ್ಲಿ ಪಿಸು ಮಾತು ಶುರುವಾಗಿದೆ. ಸಿದ್ದರಾಮಯ್ಯ ದೆಹಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು, ರಾಜ್ಯದಲ್ಲಿ ಗದ್ದುಗೆ ಗಟ್ಟಿ ಮಾಡಿಕೊಳ್ಳಲು ಸಿದ್ದರಾಮಯ್ಯ ತಮ್ಮ ಶಿಷ್ಯರ ಮೂಲಕ ಪಿಸುಮಾತು ಆಡಿಸುತ್ತಿದ್ದಾರೆ. ಕಾಂಗ್ರೆಸ್ ಮುಗಿಸಲು ಕಾಂಗ್ರೆಸ್ ನಾಯಕರೇ ಸಾಕು ಎಂದರು.
ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಗಂಗೋತ್ರಿ. ಎಲ್ಲರ ಮೇಲೆ ಆರೋಪ ಇದೆ. ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್ ನವರಿಗೆ ನೈತಿಕತೆ ಎಲ್ಲಿದೆ ಎಂದು ಪ್ರಶ್ನಿಸಿದ ಅವರು, ನಾವು ಜನರ ಜೊತೆ ಇರುವವರು. ಭೂಮಿಯಲ್ಲಿ ಆಳವಾಗಿ ಬೇರೂರಿರುವವರು. ನಿಮ್ಮ ಹಾಗೆ ಕುಂಡಲಿಯಲ್ಲಿ ಇರುವ ಗಿಡಗಳಲ್ಲ. ಅಧಿಕಾರ ಶಾಶ್ವತ ಅಲ್ಲ. ವಿಶ್ವಾಸ ಶಾಶ್ವತ. ನಾನು ನಿಮ್ಮ ಪ್ರೀತಿ ವಿಶ್ವಾಸ ಗಳಿಸಲು ಬಂದಿದ್ದೇನೆ ಎಂದು ಹೇಳಿದರು.
ಹಿರೇಕೌಂಸಿ, ಬಾಳಬೀಡ ನೀರಾವರಿ ಯೋಜನೆ ಮಾಡಿದ್ದು ಬಿಜೆಪಿ. ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿದ್ದ ವೇಳೆ ಇವರು ಮಾಡಿದ್ದಾದರೂ ಏನು. ಕೆರೆ ತುಂಬಿಸುವ ಯೋಜನೆ ಬಗ್ಗೆ ಸಿದ್ದರಾಮಯ್ಯ ನವರಿಗೆ ದಾಖಲೆ ಕಳುಹಿಸಿಕೊಡುವೆ. ಬಾರಪ್ಪ ಬಾ ಸಿದ್ದರಾಮಣ್ಣ, ಬೊಮ್ಮಾಯಿ ಏನು ಅಭಿವೃದ್ಧಿ ಮಾಡಿದ್ದಾರೆ ಎಂಬುದನ್ನು ನೋಡು ಎಂದು ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಕೋವಿಡ್ ಸಂದರ್ಭದಲ್ಲಿ ಜನರ ಜೀವ ಉಳಿಸಿದ್ದು ಬಿಜೆಪಿ ಸರ್ಕಾರ. ಈ ಕ್ಷೇತ್ರದ 20 ಸಾವಿರ ಜನರಿಗೆ ಕಾರ್ಮಿಕ ಇಲಾಖೆ ಆಹಾರ ಕಿಟ್ ನೀಡಿದ್ದೇವೆ. ಕೋವಿಡ್ ವೇಳೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ನಿಜವಾದ ಸೇವೆ ಮಾಡಿದೆ. ಸೇವೆ ಮಾಡಿದ್ದೇವೆ ಎಂದು ಕಾಂಗ್ರೆಸ್ ನವರು ಜನರ ಬಳಿ ಮತ ಕೇಳುತ್ತಿದ್ದಾರೆ. ಇವರು ಯಾವ ಸೇವೆ ಮಾಡಿದ್ದಾರೆ ಎಂದು ಪ್ರಶ್ನಿಸಿದರು.